Wednesday, June 22, 2011

ಚೆಲುವ











ಅನವರತ ಅಕ್ಕರೆಯ ಅವಭೃತವ ಮಾಡಿಸುವ

ಅನುರಾಗ ಭಾವವನು ನಿರುತ ಪಸರಿಸುವ

ಅಕಳಂಕ ಪ್ರೇರಣೆಯ ಅಂತರಾಳದಿ ಬೆಸೆವ

ಒಲವ ದೇಗುಲದಲಿರುವ ಚೆಲುವ ದೇವಗೆ ನಮಿಪೆ.... (೧)


ಚಿಂತೆಗಳ ಹರಿಸುತ್ತ ಚಿಂತನೆಯ ಮಾಡಿಸುತ

ಸಂತತ ಮನದಲಿ ನೆಲೆಸಿ ಸಾಂತ್ವನವ ಮೂಡಿಸುತ

ಸತ್ವಭಾವದ ಧಾರೆ ನಿರುತ ಧುಮ್ಮಿಕ್ಕಿಸುವ

ಒಲವ ದೇಗುಲದಲಿರುವ ಚೆಲುವ ದೇವಗೆ ನಮಿಪೆ ... (೨)


ಪರಿಶುದ್ಧ ಕರಣಗಳ ಅನವರಣ ಮಾಡಿಸುವ

ಪರಿಕಲ್ಪ ಚಾರಣಕೆ ಆವರಣ ಕಲ್ಪಿಸುವ

ಪದತಡಿಯ ಪೂಜಿಸಲು ಅಂತರಂಗದಿ ನೆಲೆಸುವ

ಒಲವ ದೇಗುಲದಲಿರುವ ಚೆಲುವ ದೇವಗೆ ನಮಿಪೆ ....(೩)


ದೇಹಭಾವವ ಮೀರಿ ದೇವಭಾವದ ಎಡೆಗೆ

ಚೇತನದ ನಾವೆಯಲಿ ದಡವನ್ನು ಮುಟ್ಟಿಸುತ

ಮಸುಕಿನಾ ಪಯಣದಲಿ ಬೆಳಕನ್ನು ತೋರಿಸುವ

ಒಲವ ದೇಗುಲದಲಿರುವ ಚೆಲುವ ದೇವಗೆ ನಮಿಪೆ ...(೪)


ಚಿತ್ರಕೃಪೆ : ಅಂತರ್ಜಾಲ

28 comments:

  1. ಅನಂತರಾಜರೆ,
    ಸುಂದರವಾದ ಪ್ರಾರ್ಥನಾಗೀತೆಯನ್ನು ಕೊಟ್ಟ ನಿಮಗೆ ನಮೋ ಎನುವೆ. ಒಲವ ದೇಗುಲದಲ್ಲಿರುವ ಚೆಲುವ ದೇವನು ನಿಮ್ಮನ್ನು ಹಾಗು ನಮ್ಮನ್ನು ಅನುಗ್ರಹಿಸಲಿ.

    ReplyDelete
  2. This comment has been removed by the author.

    ReplyDelete
  3. ದೈವತ್ವದ ಸುಂದರ ಭಾವಗಳನ್ನು ಪದಪುಂಜಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೀರಿ ಅನಂತ್ ಸಾರ್. ಭಕ್ತಿಯ ಭಾವ, ನಮ್ಮ ಅಂತರಾಳದ ಒಳಗೆ ಒಲವ ದೇಗುಲದಲಿರುವ, ನಮ್ಮ ಬಾಳಿಗೆ ದಿಕ್ಕು ತೋರುವ, ಚೆಲುವ ದೇವ, ಮುದ್ದು ಮೊಗದ ಹರಿಗೆ ನಿಮ್ಮೊಡನೆ ನನ್ನದೊಂದು ನಮನ. ನೀವು "ಅ" ಅಕ್ಷರದಿಂದ ಆರಂಭವಾಗುವ ಒಟ್ಟು ೯ ವಿಶೇಷ ಪದಗಳನ್ನು ಬಳಸಿದ್ದೀರಿ. ನನಗೆ ತುಂಬಾ ಆಪ್ತ ಅನಿಸಿತು. ಲಯ, ಭಾವ, ಎಲ್ಲವೂ ಮನ ಮುಟ್ಟುವಂತಿದೆ. ತುಂಬಾ ಇಷ್ಟವಾಯಿತು. ಧನ್ಯವಾದಗಳು.

    ನೀವು ನಿಮ್ಮ ಕವನಗಳನ್ನು ಬ್ಲಾಗಿಸಲು ಪ್ರಾರಂಭಿಸಿ ಒಂದು ವರ್ಷವಾಯಿತು ಆಲ್ವಾ ಸಾರ್? ಈ ಕವನ ಮೊದಲ ಹುಟ್ಟು ಹಬ್ಬದ ಕೊಡುಗೆ ನಮಗೆ!! :-)..
    ಹಾರ್ದಿಕ ಅಭಿನಂದನೆಗಳು. ಹೀಗೇ ನಿಮ್ಮ ಭಾವನೆಗಳ ಲಹರಿ ನಿರಂತರ ಹರಿಯಲಿ ನಮಗೆ ಒಳ್ಳೊಳ್ಳೆಯ ಕವನಗಳು ಓದಲು ಸಿಗಲಿ ಎಂದು ಆ ಚೆಲುವ ದೇವನನ್ನು ಪ್ರಾರ್ಥಿಸುತ್ತೇನೆ.
    ಶ್ಯಾಮಲ

    ReplyDelete
  4. ಅನಂತ್ ಸರ್, ವಾರ್ಷಿಕ ಕೊಡುಗೆ ಅಪೂರ್ವ ಮತ್ತು ನಿಮ್ಮ ಬ್ಲಾಗ್ ನ ಹುಟ್ಟುಹಬ್ಬದ ಹಾರ್ದಿಕ ಶುಭಕಾಮನೆಗಳು...ಪದಬಳಕೆ ಧನ್ಯತಾಭಾವಕ್ಕೆ ತಕ್ಕಂತಿದೆ...

    ReplyDelete
  5. ಚೆಲುವ ದೇವನ ನೆನೆದು ನಮಿಸುವಂತೆ ಮಾಡಿದ ಚೆಂದದ ಕವನ ಬರೆದವರಿಗೆ ನನ್ನ ಅಭಿನಂದನೆಗಳು!

    ReplyDelete
  6. ಅನ೦ತ ಸರ್
    ತು೦ಬಾ ಸು೦ದರವಾಗಿ ಮೂಡಿದೆ..ಗೀತೆ..
    ಮನಸ್ಸಿನೊಳಗೆಯೇ ರಾಗವಾಗಿ ಹಾಡಿಕೊ೦ಡೆ...
    ಚಲುವ ದೇವನನ್ನು ಚ೦ದವಾಗಿ ರಚಿಸಿದ್ದೀರಿ..

    ReplyDelete
  7. ಅನಂತ್ ಸರ್, ದೇವರೇ ಚಲುವ, ಅದರಲ್ಲೂ ಕೃಷ್ಣ ಚೆಲುವರಲ್ಲಿ ಚೆಲುವ. ಅಂತಹ ಚೆಲುವನನ್ನು ನೆನೆದಿದ್ದೀರಿ, ಬ್ಲಾಗ್‍ನ ವರ್ಷಾಚರಣೆ ಮಾಡುತ್ತಿದ್ದೀರಿ ಎಂದು ಕೇಳಿದೆ,ಅಭಿನಂದನೆಗಳು ಮತ್ತು ಶುಭಹಾರೈಕೆಗಳು

    ReplyDelete
  8. ನಿಮ್ಮ ಬ್ಲಾಗಿನ ವಾರ್ಷಿಕೋತ್ಸವಕ್ಕೆ ಅಭಿನಂದನೆಗಳು.
    ಮುದ್ದು ಕೃಷ್ಣನನ್ನು ಆರಾಧಿಸುವ ಕವನದಲ್ಲಿ ಭಾವ,ಲಯಗಳು ತುಂಬಿ ಓದಲು ಸಂತಸವಾಯ್ತು.ಕವನಕ್ಕೆ ತಕ್ಕ ಛಾಯಾಚಿತ್ರ.

    ReplyDelete
  9. ಭಾವಪೂರ್ಣ ಪ್ರಾರ್ಥನೆ.....
    ಶುಭವಾಗಲಿ ...

    ReplyDelete
  10. @ಸುನಾತ್ ಸರ್ - ಮೊಮ್ಮೊದಲು ಪ್ರತಿಕ್ರಿಯಿಸಿ ಆಶೀರ್ವದಿಸಿದ ತಮಗೆ ವ೦ದನೆಗಳು. ಕವನದ ಭಾವವನ್ನು ಮೆಚ್ಚಿ ಪ್ರತಿಕ್ರಿಯಿಸುವ ತಮ್ಮ ಪ್ರೋತ್ಸಾಹದ ಮಾತುಗಳು ಅಮೂಲ್ಯ. ಧನ್ಯವಾದಗಳು.

    ಅನ೦ತ್

    ReplyDelete
  11. @ಶ್ಯಾಮಲಾ - ಅ೦ತರ೦ಗದಲ್ಲಿನ ದೇವಭಾವವನ್ನು ಗುರುತಿಸಿಕೊ೦ಡಲ್ಲಿ ಅದೊ೦ದು ದೇವಾಲಯವೇ ಆಗಿಬಿಡುತ್ತದೆ. ಚೆಲುವ ದೇವನನ್ನು ಅಲ್ಲಿ ಪ್ರತಿಷ್ಠಾಪಿಸಿಕೊಳ್ಳುವ ಅನುಸ೦ಧಾನ, ನ೦ತರ ಮಾಡಿಕೊಳ್ಳುವ ಪ್ರಕ್ರಿಯೆ. ನಿಮ್ಮ ಸು೦ದರ ಪ್ರತಿಕ್ರಿಯೆಗೆ ಹಾಗೂ ಅಭಿಮಾನದ ಮಾತುಗಳಿಗೆ ಧನ್ಯವಾದಗಳು. ತಾಣದ ಮೊದಲ ವರುಷದ ಹುಟ್ಟುಹಬ್ಬಕ್ಕೆ ಹಾರೈಸಿದ್ದೀರಿ. ಮತ್ತೊಮ್ಮೆ ಅನ೦ತ ಧನ್ಯವಾದಗಳು.

    ಅನ೦ತ್

    ReplyDelete
  12. @ಅಜಾದ್ ಸರ್ - ಶುಭ ಹಾರೈಸಿದ್ದೀರಿ ಹಾಗೂ ಕವನವನ್ನು ಮೆಚ್ಚಿ ಬರೆದು ತಿಳಿಸಿದ್ದೀರಿ. ವ೦ದನೆಗಳು ಸರ್.

    ಅನ೦ತ್

    ReplyDelete
  13. @ಪ್ರದೀಪ್ - ಚೆಲುವ ದೇವನ ಚೆಂದದ ಕವನ ಎ೦ದು ಮೆಚ್ಚಿ ಪ್ರತಿಕ್ರಿಯಿಸಿದ್ದೀರಿ. ಧನ್ಯವಾದಗಳು ಸರ್.

    ಅನ೦ತ್

    ReplyDelete
  14. @ ವಿಜಯಶ್ರೀ ಮೇಡ೦ - ತು೦ಬಾ ಸು೦ದರವಾಗಿ ಮೂಡಿದೆ..ಗೀತೆ..ಎ೦ದು ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ವ೦ದನೆಗಳು.

    ಅನ೦ತ್

    ReplyDelete
  15. @ ಭಟ್ ಸರ್ - ಕವನವನ್ನು ಮೆಚ್ಚಿ ಪ್ರತಿಕ್ರಿಯಿಸುತ್ತ, ಬ್ಲಾಗ್‍ನ ವರ್ಷಾಚರಣೆಗೆ ಶುಭ ಹಾರೈಸಿದ್ದೀರಿ. ಧನ್ಯವಾದಗಳು ಸರ್.

    ReplyDelete
  16. @ ಮ೦ಜುಳಾದೇವಿ - ಕವನದ ಭಾವ, ಲಯಗಳನ್ನು ಮೆಚ್ಚಿ ಬ್ಲಾಗಿನ ವಾರ್ಷಿಕೋತ್ಸವಕ್ಕೆ ಅಭಿನಂದನೆಗಳನ್ನು ತಿಳಿಸಿದ್ದೀರಿ. ಧನ್ಯವಾದಗಳು ಮೇಡ೦.

    ಅನ೦ತ್

    ReplyDelete
  17. ॒@ ಆಶಾ - ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡ೦.

    ಅನ೦ತ್

    ReplyDelete
  18. This comment has been removed by the author.

    ReplyDelete
  19. ಚೆ೦ದದ ಕವನ..

    ಚೇತನದ ನಾವೆಯಲಿ ದಡವನ್ನು ಮುಟ್ಟಿಸುವ,
    ಮಸುಕಿನಾ ಪಯಣದಲಿ ಬೆಳಕನ್ನು ತೊರಿಸುವ ಚೆಲುವ ದೇವಗೆ,
    ಭಾವ ತು೦ಬಿದ ಸು೦ದರ ಗೀತೆ ಬ೦ದಿಹುದು ನಮಿಸುತ್ತಾ,
    ಅಕ್ಷರಗಳ ರೂಪದಲಿ ಹರಿಯ ಸ್ಮರಿಸುತ್ತಾ,

    ಅನ೦ತ್ ಸರ್,ಬ್ಲಾಗ್ ನ ಎರಡನೆ ವರ್ಷದಲ್ಲಿ ಇನ್ನಷ್ಟು ಚೆ೦ದದ ಕವನಗಳು ಬರುತ್ತಿರಲಿ..
    ಶುಭಹಾರೈಕೆಗಳು.

    ReplyDelete
  20. @ ಮನಮುಕ್ತ ಮೇಡ೦ - ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು. ಚೆಲುವಿನ ದೇವನ ನೆನೆಕೆಯನ್ನು ಮೆಚ್ಚಿದ್ದೀರಿ ಹಾಗೂ ಬ್ಲಾಗಿನ ವರ್ಷಾಚರಣೆಗೆ ಶುಭ ಹಾರೈಸಿದ್ದೀರಿ. ಧನ್ಯವಾದಗಳು.

    ಅನ೦ತ್

    ReplyDelete
  21. ಮನವನ್ನು ಮುದಗೊಳಿಸುವ ಸು೦ದರ ಕವನ ನೀಡಿದ್ದಕ್ಕಾಗಿ ವ೦ದನೆಗಳು ಸರ್.

    ReplyDelete
  22. @ಪ್ರಭಾಮಣಿ ಮೇಡ೦ - ಮೆಚ್ಚಿ ಬರೆದು ತಿಳಿಸಿದ ತಮಗೆ ವ೦ದನೆಗಳು.

    ಅನ೦ತ್

    ReplyDelete
  23. ಅನಂತರಾಜ್ ಸರ್ ನಿಮ್ಮ ಬ್ಲಾಗ್ ನ ಜನ್ಮ ದಿನದ ಶುಭಾಶಯಗಳು . ಅರ್ಥಪೂರ್ಣ ಪ್ರಾರ್ಥನಾ ಗೀತೆಗಾಗಿ ಅಭಿನಂದನೆಗಳು.

    ReplyDelete
  24. Bhala Atyuthama vagide Uncle mathodu vakyane illa Adbhutavagi bhala Artha poorna vagi sulba reetiyagi Artha hagoage baredidhree uncle namma yalla parvagi Abhinandhane galu..:)

    ReplyDelete
  25. @ಕಲರವ ಮೇಡ೦ - ಬ್ಲಾಗಿನ ವರ್ಷದ ಹರ್ಷಕ್ಕೆ ಹರಿಸಿದ್ದೀರಿ ವ೦ದನೆಗಳು. ಕವನವನ್ನು ಮೆಚ್ಚಿದ್ದೀರಿ. ಮತ್ತೊಮ್ಮೊ ವ೦ದನೆಗಳು.

    ಅನ೦ತ್

    ReplyDelete
  26. @ಅರ್ಚನ - ತಾಣಕ್ಕೆ ಸ್ವಾಗತ ಅರ್ಚನಾ. ಕವನವನ್ನು ಮೆಚ್ಚಿ ಬರೆದು ತಿಳಿಸಿದ್ದೀರಿ. ನಿಮಗೂ ವ೦ದನೆಗಳು.

    ಅನ೦ತ್

    ReplyDelete
  27. ಪ್ರಾರ್ಥನಾ ಗೀತೆಗಳು ಎಂದಿಗೂ ಸುಂದರವಾಗಿರುತ್ತವೆ. ನಿಮ್ಮ ಶಬ್ದ, ಪದಗಳ ಬಳಕೆ ಭಾವಪೂರ್ಣವಾಗಿದೆ

    ReplyDelete
  28. ತಾಣಕ್ಕೆ ಭೇಟಿ ನೀಡಿ ಮೆಚ್ಚುಗೆಯ ಪ್ರತಿಕ್ರಿಯೆಯನ್ನು ದಾಖಲಿಸಿದ ದೀಪಸ್ಮಿತಾ ಅವರಿಗೆ ವ೦ದನೆಗಳು.

    ಅನ೦ತ್

    ReplyDelete