Wednesday, August 8, 2012

ನೀಲಿ ಕಣ್ಣಿನ ಹುಡುಗ...

























ನೋವು ತರುವುದು ತರವೇ ಗೆಳೆಯನೆ
ಒಲವ ಹರವು ಹರಿಯದೇ?
ಸಹಿಸಲಾರೆನು ಇನ್ನು ವಿರಹವ
ಇನಿಯ ನನ್ನಲಿ ಕೋಪವೇ? || ೧ ||

ನೀಲಿ ಕಣ್ಣಿನ ಹುಡುಗ ನಿನ್ನಯ
ನೋಟದಿ೦ದಲೆ ಧನ್ಯತೆ
ಹಾಡ ಹಾಡಿದೆ ಹೃದಯವೆಲ್ಲವೂ
ನಿನ್ನ ಧ್ಯಾನದಿ ಏಕತೆ || ೨ ||

ಸವಿಯ ನುಡಿಯಲಿ ಮೋಹಗೊಳಿಸುತ
ಪ್ರೀತಿ ಬೀಜವ ಬಿತ್ತಿದೆ
ನಿನ್ನ ಮನಸಿನ ತೋಟದಲ್ಲಿಯೆ
ಹೂವು ಆಗಲು ಬಯಸಿಹೆ || ೩ ||

ಕದುಪು ಅರುಣನ ಬಣ್ಣವೆತ್ತಿದೆ
ನಿನ್ನ ಮಧುರ ನೆನಪಿಗೆ
ಭಾವ ಸಾಗರದಲ್ಲಿ ಮೀಯುತ
ಮನವು ನಿನ್ನನೇ ಅರಸಿದೆ || ೪ ||

ಜೀವ ಪಯಣಕೆ ಜಗದ ನಿಯಮಕೆ
ನೀನದೆಲ್ಲಕೆ ಕರ್ತೃವು
ಗೆಳತಿ ರಾಧೆಯ ಕಣ್ಗಳಲ್ಲಿಯೇ
ಶ್ಯಾಮ ನಿನ್ನಯ ರೂಪವು || ೫ ||

ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಚಿತ್ರಕೃಪೆ ; ಅಂತರ್ಜಾಲ

5 comments:

  1. ಅನನ್ಯ ಪ್ರೀತಿಯ ಸಂಕೇತದಂತಿರುವ ರಾಧೆಯ ಮನದ ಭಾವವನ್ನು ತುಂಬಾ ಚೆನ್ನಾಗಿ ಬಿಂಬಿಸಿರುವಿರಿ.
    ನಿಮಗೂ ಗೋಕುಲಾಷ್ಟಮಿಯ ಶುಭಾಶಯಗಳು.

    ReplyDelete
  2. ಜನ್ಮಾಷ್ಟಮಿಯ ದಿನ ಒಳ್ಳೆಯ ಕವನ ಕೊಟ್ಟಿದ್ದೀರಿ ಅನಂತ್ ಸಾರ್.. ಧನ್ಯವಾದಗಳು. ಎಲ್ಲಕ್ಕಿಂತಲೂ "ಭಾವ"ವೇ ಮುಖ್ಯ ಮತ್ತು ವಿಶೇಷವಾಗಿ ಈ ದಿನ ಭಾವ ಸಾಗರದಲ್ಲಿ ಮೀಯುತ್ತಾ ಕೃಷ್ಣನ ಧ್ಯಾನವನ್ನೇ ಮಾಡಬೇಕೆಂಬ ಮಾತು ತುಂಬಾ ಸರಳವಾಗಿ ಹೇಳಿದ್ದೀರಿ... ನಿಮಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.

    ಶ್ಯಾಮಲಾ

    ReplyDelete
  3. ರಾಧೆಯ ಆರಾಧನಾ ಭಾವನೆ ಮಧುರವಾಗಿ ಕವನದ ತುಂಬ ಹರಿದಿದೆ. ಇದು ಪರಮಾತ್ಮನ ಬಗೆಗೆ ಜೀವಕ್ಕಿರುವ ಭಾವನೆಯೂ ಆಗಿದೆ.

    ReplyDelete
  4. ಶ್ರೀಕೃಷ್ಣ ಜನ್ಮಾಷ್ಠಮಿಗೆ ಒಂದು ಉತ್ತಮ ಸರಳ ಭಾವಪೂರ್ಣ ಕವನ.
    ಧನ್ಯವಾದಗಳು.
    ಚಂದ್ರು

    ReplyDelete
  5. ಸೊಗಸಾದ ಕವನ ಸರ್......

    ReplyDelete