Monday, June 25, 2012

ಮನೋವ್ಯಾಪಾರ...


"ಟ್ರಿಣ್ ಟ್ರಿಣ್.."  ಓಹ್... ಮತ್ತೆ ಕರೆಗಂಟೆಯ ಸದ್ದು.  ಈಗಿನ್ನೂ ಪಕ್ಕದ ಮನೆಯಾಕೆ ಬಂದು ಸಾಕಷ್ಟು ಅನವಶ್ಯಕವಾದ ಮಾತುಗಳನ್ನು ಬಲವಂತವಾಗಿ ನನ್ನ ತಲೆಯಲ್ಲಿ ತುಂಬಿಸಿ, ಸಮಯ ನಷ್ಟ ಮಾಡಿ ಹೋಗಿಯಾಗಿತ್ತು  ಆದರೆ ಈಗ ಬಂದವರು ನನ್ನ ದೂರದ ಬಂಧುಗಳು.  ಅವರ ಮಗನಿಗೆ ನೌಕರಿಯ ಹಿನ್ನೆಲೆಯಲ್ಲಿ ವಶೀಲಿಗಾಗಿ ನಮ್ಮ ಸಹಾಯದ ನಿರೀಕ್ಷಣೆ ಬಯಸಿ ಬಂದಿದ್ದರುಸಹಾಯದ ಅಗತ್ಯವಿದೆಯೆಂದು, ಅತಿರೇಕವಾಗಿ ಹೊಗಳಿಕೆಯ ಮಾತುಗಳನ್ನಾಡುತ್ತಿದ್ದರು.  ನನ್ನನ್ನು ಮುಜುಗರ ಹಾಗೂ ಜಿಗುಪ್ಸೆಗೆ ಒಳಗಾಗುವಂತೆ ಮಾಡುತ್ತಿದ್ದರು.

ಇಂತಹ ಘಟನೆಗಳು ನಮ್ಮ ಜೀವನದಲ್ಲಿ ಯಥಾರೀತಿಯಲ್ಲಿ ಪ್ರವಾಹದಂತೆ ದಿನ ದಿನವೂ ಬರುತ್ತಲೇ ಇರುತ್ತವೆ.  ಪರಸ್ಪರ ಸಹಾಯ ಮಾಡುವುದು ಮಾನವ ಧರ್ಮವೂ ಮತ್ತು ಜೀವನದ ಮೌಲ್ಯವೆಂದೂ ಒಪ್ಪಿಕೊಳ್ಳೋಣ.  ಆದರೆ ಪ್ರತೀ ಘಟನೆಯ ಹಿನ್ನೆಲೆಯನ್ನು  ಗಮನಿಸಿದಾಗ ಇದರಲ್ಲಿ ನಮಗೆ ಒಂದು ವ್ಯಾಪಾರೀ ಮನೋಭಾವವು ಖಂಡಿತಾ ಗೋಚರವಾಗುತ್ತದೆ.  ಹಾಗೆ ನೋಡಿದರೆ ನಮ್ಮ ಜೀವನವೇ ಒಂದು ವ್ಯಾಪಾರ ಎನ್ನಬಹುದಾದರೂ ನಮ್ಮ ದಿನ ನಿತ್ಯದ ನಡವಳಿಕೆಗಳಲ್ಲೂ ವ್ಯಾಪಾರಿ ಮನೋಭಾವ ಇಣುಕತೊಡಗಿದಾಗ, ಸ್ವಲ್ಪ ಗಮನ ಕೊಟ್ಟು ಅವಲೋಕಿಸಬೇಕಾಗುತ್ತದೆ.  ನಾವೆಲ್ಲರೂ ಜೀವನ ಸಾಗುವಿಕೆಗೆ ಒಂದು ವೃತ್ತಿಯನ್ನು ಆಯ್ದುಕೊಂಡಿರುತ್ತೇವೆ,  ಅದೂ ಕೂಡ ಒಂದು ವ್ಯಾಪಾರವೇ ಆಗಿದೆ.  ಏಕೆಂದರೆ ಸುಖವಾಗಿ, ನೆಮ್ಮದಿಯಾಗಿ ಜೀವನ ನಡೆಸಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇದೆ.  ಆದರೆ ನಮ್ಮದಿ ಹಾಗೂ ಸುಖ ಜೀವನಕ್ಕಾಗಿ ಎಷ್ಟು ಅವಶ್ಯಕತೆ ಇದೆಯೆಂಬುದು ಮಾತ್ರ ಅಳೆಯಲಾಗದಾಗಿದೆ.  ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಾ ಹೋದ ಹಾಗೆ, ಹೊಸ ಹೊಸ ಅವಶ್ಯಕತೆಗಳು ಹುಟ್ಟಿ ಕೊಳ್ಳುತ್ತಲೇ ಇರುತ್ತವೆ.  ಹೀಗೆ ಹೊಸದಾಗಿ ಹುಟ್ಟಿಕೊಳ್ಳುತ್ತಾ ಹೋಗುವ ಆಸೆಗಳು (ಅವಶ್ಯಕತೆ) ಸುಖೀ ಜೀವನದ ಶಿಖರದ ಸೋಪಾನಗಳು ಎಂದು ನಾವು ತಿಳಿದುಕೊಳ್ಳುತ್ತಾ ಹೋದರೆ, ಅವಶ್ಯಕತೆಗಿಂತ ಹೆಚ್ಚು ಸವಲತ್ತುಗಳನ್ನು ಬಯಸುತ್ತಾ ಅದನ್ನು ಪೂರೈಸಿಕೊಳ್ಳಲಿಕ್ಕೆ ನಮ್ಮ ಗಳಿಕೆಯನ್ನೂ ಹೆಚ್ಚು ಮಾಡಿಕೊಳ್ಳಲೇ ಬೇಕಾಗುತ್ತದೆ.  ಗಳಿಕೆಯನ್ನು ಹೆಚ್ಚಿಸಿಕೊಳ್ಳಲೋಸುಗ, ನಾವು ವೃತ್ತಿಯನ್ನು ಬದಲಾಯಿಸುತ್ತಾ ಹೋಗುತ್ತೇವೆ.  ಇಲ್ಲಿ ಗಳಿಕೆಯೇ ಮುಖ್ಯ ಪಾತ್ರವನ್ನು ವಹಿಸುತ್ತದೆಯೇ ಹೊರತು ನಮ್ಮ ಮನಸ್ಸಿನ ತೃಪ್ತಿಯಲ್ಲ.  ಈ ಹಂತದಲ್ಲಿ, ನಮಗರಿವಿಲ್ಲದಂತೆ ಜೀವನ ಪೂರ್ತಿಯಾಗಿ ವ್ಯಾಪಾರವಾಗಿಬಿಟ್ಟಿರುತ್ತದೆ.  ಬದಲಾವಣೆಯೆಂದರೆ ನಾವು ಇಲ್ಲಿ ಪದಾರ್ಥಗಳನ್ನು ಮಾರುವುದಿಲ್ಲ ಆದರೆ ನಮ್ಮ ’ಸೇವೆಯನ್ನು’ ಮಾರುತ್ತೇವೆ ಮತ್ತು ಸುಖ ಕೊಳ್ಳುವ ದಿಕ್ಕಿನಲ್ಲಿ ಚಲಿಸುತ್ತೇವೆ.

ವ್ಯಾಪಾರೀ ಮನೋಭಾವದ ಕಾರ್ಯವ್ಯಾಪ್ತಿ ನಮ್ಮ ಬದುಕಿನ ದಾರಿಯ ಪ್ರತಿಯೊಂದು ನಡೆಯಲ್ಲೂ ವ್ಯಾಪಿಸಿಕೊಂಡಿದೆ ಎಂದರೆ ಆಶ್ಚರ್ಯ ಎನ್ನಿಸಬಹುದು.  ಕೊಡು-ಕೊಳ್ಳುವಿಕೆಯೇ ಜೀವನದ ಅರ್ಥವಾಗಿಬಿಟ್ಟಿದೆ.  ನಮ್ಮ ನಡವಳಿಕೆಯ ಮೂಲವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ನಮ್ಮ ಆಂತರ್ಯದ ಸತ್ಯಾಸತ್ಯತೆನ್ನು ವಂಚನೆಯಿಲ್ಲದೆ ಶೋಧಿಸಿದಾಗ, ವ್ಯಾಪಾರದ ಲಕ್ಷಣ ಸ್ಪಷ್ಟವಾಗಿ ಕಾಣಿಸತೊಡಗುತ್ತದೆ.  ಈ ವ್ಯಾಪಾರೀ ಮನೋಭಾವ ನಮ್ಮಲ್ಲಿ ಗುಪ್ತಗಾಮಿನಿಯಂತೆ ಸದಾ ಹರಿಯುತ್ತಿರುತ್ತದೆ.  ಇದನ್ನು ನಾವೇ ಗುರುತಿಸಿ, ಕಾರಣ ಹುಡುಕ ಬೇಕು.

ಸೃಷ್ಟಿಯ ಅದ್ಭುತ ರಚನೆಯಿಂದಾಗಿ ಶಿಶುವು ಜನನಿಯ ಗರ್ಭದಲ್ಲಿ ಬಹಳ ಸುರಕ್ಷಿತವಾಗಿ, ತಾಯಿಯ ಅಷ್ಟೂ ಭಾವಗಳನ್ನೂ,  ದೇಹದಲ್ಲಿನ ಪೂರಕಾಂಶಗಳನ್ನೂ ಉಪಯೋಗಿಸಿಕೊಂಡು, ಬೆಳೆಯುತ್ತದೆ.  ಗರ್ಭವಾಸದಲ್ಲಿ ಮಗುವಿಗೆ ಯಾವ ರೀತಿಯ ಭಯ, ಪ್ರಕೃತಿಯೊಂದಿಗಿನ ಸಂಪರ್ಕ ಇರುವುದಿಲ್ಲ.  ಆದರೆ ಗರ್ಭವಾಸದಿಂದ ಹೊರಬಂದೊಡನೆ ಗಟ್ಟಿಯಾಗಿ ಚೀರಲು ಪ್ರಾರಂಭಿಸುತ್ತದೆ.  ತಾನು ತಾಯಿಯ ಬೆಚ್ಚಗಿನ ಸುರಕ್ಷಿತ ತಾಣದಿಂದ ಹೊರಗೆ ಬಂದು ಬಿಟ್ಟಿರುವ ಅರಿವು ಮಗುವಿಗೆ ಮೊದಲ ಬಾರಿ ಬಂದಿರುತ್ತದೆ.  ತನ್ನನ್ನು ರಕ್ಷಿಸುವ ಕವಚ ಇಲ್ಲವೆಂಬ ಭಯದ ಭಾವನೆಯೇ ಇದಕ್ಕೆ ಕಾರಣವಾಗಿದೆ.  ಯಾವಾಗ ತಾಯಿ ಮಗುವನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು ತಾಯ್ತನದ ಅಕ್ಕರೆಯ ಅರಿವು ಮೂಡಿಸುವಳೋ, ಆಗ ಮಗು ಮತ್ತೆ ಸುರಕ್ಷಿತ ಭಾವದಿಂದ ಶಾಂತವಾಗುತ್ತದೆ.  ಗರ್ಭವಾಸದಲ್ಲಿರುವಾಗ ಮಗುವಿಗೆ ಇದ್ದ ಸಮಾಧಾನ, ಸುಖ ಹೊರಗೆ ಬಂದೊಡನೆ ತಪ್ಪುವುದೆಂಬ ಭಯವೇ ಇದಕ್ಕೆ ಕಾರಣವೆಂಬ ಅಂಶ ಆಧಾರವಾಗಿಟ್ಟುಕೊಂಡಾಗ ದಿನಂಪ್ರತಿ  ಬದಲಾಗುವ ನಮ್ಮೆಲ್ಲ ಈ ಮನೋಭಾವಗಳಿಗೆ ಭಯವೇ ಮೂಲ ಕಾರಣವಾಗಿದೆ ಎಂದು ಸಮೀಕರಿಸಬಹುದು.

ತನ್ನ ಬೇಕು-ಬೇಡಗಳನ್ನು ತಾಯಿ ಪೂರೈಸುತ್ತಾಳೆಂದು ನೆಮ್ಮದಿ ಹಾಗೂ ತೃಪ್ತಿಯಿಂದಿರುವ ಶಿಶುವು, ತನ್ನ ಮೂಲಭೂತ ತೃಪ್ತಿಗೇ, ನೆಮ್ಮದಿಗೇ ಧಕ್ಕೆ ಬಂದಾಗ ಸಹಜವಾಗಿ ಪ್ರತಿರೋಧವನ್ನು ಪ್ರಾರಂಭಿಸುತ್ತದೆ.  ಇಲ್ಲಿ  ಭಯವೇ ಮೂಲ ಕಾರಣವಾಗಿದ್ದು, ತನ್ನ ಸುರಕ್ಷತೆ, ನೆಮ್ಮದಿ, ತೃಪ್ತಿ ಸಿಕ್ಕದಿದ್ದಾಗ ವ್ಯಾಪಾರೀ ಮನೋಭಾವಕ್ಕೆ ದಾರಿಯಾಗುತ್ತದೆ.  ಎಂತಹ ಆಪ್ತ ಸಂಬಂಧಗಳಲ್ಲೂ ಕೂಡ ವ್ಯಾಪಾರಿತನವೇ ವಿಜೃಂಭಿಸುತ್ತಿರುತ್ತದೆ.  ಕರಾರಿಲ್ಲದ, ನಿಯಮವಿಲ್ಲದ ಯಾವುದೇ ಉನ್ನತ ಸಂಬಂಧಗಳು ಈ ಪ್ರಪಂಚದಲ್ಲಿ ಕಾಣಸಿಗುವುದಿಲ್ಲ.  ನವಿರಾದ, ಸೂಕ್ಷ್ಮವಾದ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುವ ದಂಪತಿಗಳಿರಬಹುದು, ಮಮತೆಯ ಧಾರೆಯನ್ನೇ ಹರಿಸುವ ಮಾತೆ-ಮಕ್ಕಳಾಗಿರಬಹುದು, ಸ್ನೇಹವನ್ನು ಹಂಚಿಕೊಳ್ಳುವ ಸನ್ಮಿತ್ರರಾಗಿರಬಹುದು, ಸಹೋದರ-ಸಹೋದರಿಯರಾಗಿರಬಹುದು, ನಿಯಮವಿಲ್ಲದ ಒಲವು ಎಲ್ಲಾದರೂ ಕಾಣಸಿಗುತ್ತದೆಯೇ..?

"ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀನು ನನ್ನನ್ನು ಪ್ರೀತಿಸು" - ಕರಾರಿನ ಪ್ರೇಮಗೀತೆ ಅನ್ನಿಸುವುದಿಲ್ಲವೇ?  "ನಾನು ನಿನಗೆ ಬೇಕಾದ ಸೌಲಭ್ಯಗಳನ್ನೆಲ್ಲಾ ಒದಗಿಸಿಕೊಟ್ಟಿದ್ದೇನೆ, ಆದ್ರೆ ನೀನು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ.." - ಅಂದರೆ ವ್ಯಾಪಾರದಲ್ಲಿ ನನಗೆ ನಿಜವಾಗಿ ಸಿಗಬೇಕಾದ ಲಾಭ ಸಿಗುತ್ತಿಲ್ಲ... ಎಂದುಕೊಳ್ಳಬೇಕೆ ?  ನಾನು ಇಷ್ಟು ಮೂಲಧನವನ್ನು ಹಾಕಿದ್ಡೇನೆ, ಅದಕ್ಕೆ ನನಗೆ ಇಂತಿಷ್ಟು ಲಾಭ/ಬಡ್ಡಿ ಬರಬೇಕು ಎಂಬ ಆಸೆ, ವ್ಯಾಪಾರಿಯ ನಿರೀಕ್ಷೆಯಲ್ಲವೇ...?

“ನಿನ್ನನ್ನು ಸಾಕಲು, ಓದಿಸಲು ನಾವೆಷ್ಟು ಕಷ್ಟ ಪಟ್ಟಿದ್ದೇವೆ”... "ನಿನ್ನ ಮದುವೆಗೆ ಮಾಡಿದ ಸಾಲವನ್ನು ತೀರಿಸಲು  ಒದ್ದಾಡುತ್ತಿದ್ದೇವೆ.. !"   - ಹೀಗೆ ಈ ಎಲ್ಲಾ ಸಂಬೋಧನಾ ವಾಕ್ಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವ್ಯಾಪಾರೀ ಮನೋಭಾವದ ಲಕ್ಷಣಗಳೇ ತುಂಬಿಕೊಂಡಿದೆಯಲ್ಲವೇ?

ಹಾಗಾದರೆ ನಮ್ಮ ಸುತ್ತಲೂ ಇರುವ ಪ್ರತೀ ವ್ಯಕ್ತಿಯನ್ನೂ, ಸಂಬಂಧವನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಾ ಹೋದಾಗ ನಮಗೆ ಸಂಬಂಧದ ಎಳೆಗಳ ನವಿರು ಅರ್ಥವಾಗುತ್ತಾ ಹೋಗುತ್ತದೆ.  ಯಾವ ನಿರೀಕ್ಷೆಯೂ ಇಲ್ಲದೆ, ಶುದ್ಧ ಸ್ನೇಹ, ಶುದ್ದ ಪ್ರೇಮದ ಸಂಬಂಧ ಇರುವುದು ಬಹು ಅಪರೂಪವೇ...  ಮಾನವ ಕುಲವೇ ಸಂಬಂಧಗಳ ಆಧಾರದ ಮೇಲೆ ನಿಂತಿದೆಯೆಂದಾದರೆ, ನಾವು ಅದ್ಯಾವ ಅರ್ಥದ ಸಂಬಂಧಗಳನ್ನು ಬೆಳೆಸಿದ್ದೇವೆ, ಬೆಳೆಸುತ್ತಿದ್ದೇವೆ ಎಂಬುದು ತುಂಬಾ ಮುಖ್ಯವಾದ ಪ್ರಶ್ನೆಯಾಗುತ್ತದೆ. 

ನಮ್ಮ ಪಕ್ಕದ ಮನೆಯಾತ ಕೂಡ ಇಂತಹುದೇ ’ಲಕ್ಷಣದ ಮಾತುಗಳನ್ನು’ ಮೂಟೆಯಲ್ಲಿ ಹೊತ್ತು ತಂದು ನನ್ನ ಮನದಲ್ಲಿ ತುಂಬಿಸಿ ಹೋಗಲಿಕ್ಕೆ ಬಂದವರಾಗಿದ್ದರು.  ವಶೀಲಿಗಾಗಿ ಬಂದ ದೂರದ ನೆಂಟರೂ ಕೂಡ ನನ್ನನ್ನು ತಮ್ಮ ಅತಿರೇಕ ಹೊಗಳಿಕೆಯ ಮಾತಲ್ಲಿ ಮುಳುಗಿಸಿ ತಮ್ಮ ವ್ಯಾಪಾರೀ ಭಾವಗಳನ್ನು ಪ್ರದರ್ಶಿಸಲು ಬಂದಿದ್ದರು.

ಈ ಮನೋವ್ಯಾಪಾರದಿಂದ  ಮುಕ್ತರಾಗಲು ನಾವು ನಮ್ಮ ಕಾರ್ಯವ್ಯಾಪ್ತಿಯಲ್ಲಿ ಕರಾರಿಲ್ಲದ, ನಿಯಮವಿಲ್ಲದ ಭಾವಗಳನ್ನು ಹೆಚ್ಚು ಹೆಚ್ಚು ಪ್ರಹರಿಸಲು ಶಕ್ತರಾದಲ್ಲಿ, ವ್ಯಾಪಾರ-ರಹಿತ ಜೀವನದ ನಿಟ್ಟಿನಲ್ಲಿ ನಮ್ಮ ನಡೆಗೆ ಅದು ಪೂರಕವಾಗಬಹುದು.   ಈ ನಡಿಗೆ ಸಾಧ್ಯವಾಗಲು ನಮಗೆ ಆಧ್ಯಾತ್ಮ ತುಂಬಾ ಸಹಾಯಕವಾಗುತ್ತದೆ.  ನಿಜವಾಗಿ ನೋಡಿದರೆ ನಮ್ಮ ಸಂಬಂಧ ಭಗವಂತನ ಜೊತೆಗೆ ಕೂಡ ವ್ಯಾಪಾರವೇ ಆಗಿದೆ.  ಯಾವಾಗಲೂ ನಮ್ಮ ಕೊರತೆಗಳನ್ನೂ, ನಮ್ಮ “ಬೇಕುಗಳ” ಪಟ್ಟಿಯನ್ನೂ ಅವನ ಮುಂದೆ ಒಪ್ಪಿಸುತ್ತಿರುತ್ತೇವೆಯೇ ಹೊರತು, ನೀನು ಇಷ್ಟೆಲ್ಲಾ ಕೊಟ್ಟಿರುವೆಯಲ್ಲಾ... ಎಂಬ ಭಾವ ಬರುವುದು ಬಲು ಅಪರೂಪವೇ.  “ಎಲ್ಲವನೂ ಕೊಟ್ಟಿರುವೆ.. ಏನ ಕೇಳಲಿ ಇನ್ನು..” ಎಂಬುದನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದಾಗ ನಮಗೆ ಕರಾರಿಲ್ಲದ, ನಿಯಮವಿಲ್ಲದ “ಪ್ರೇಮ” ದ ಅರಿವು ಉಂಟಾಗುತ್ತದೆ.  ಒಮ್ಮೆ ಇದು ಜಾಗೃತವಾದರೆ ಸಾಕು, ಆರೋಗ್ಯವಂತ ಸಮಾಜಕ್ಕೆ ಭದ್ರ ಬುನಾದಿಯಾಗುತ್ತದೆ.  ಪ್ರತೀ ಸಂಬಂಧವೂ, ಸಂಸಾರವೂ ಸಂತಸದಿಂದ ಇರುವಂತೆ ಆಗುತ್ತದೆ.


ಚಿತ್ರಕೃಪೆ : ಅಂತರ್ಜಾಲ

3 comments:

 1. ಸರ್‍, ಇಂದಿನ ಆಧುನಿಕ ಬದುಕಿನಲ್ಲಿ ಎಲ್ಲವೂ ಎಲ್ಲ ವಿಧದ ಸಂಬಂಧಗಳೂ ಒಂದು ವಿಧದ ಕೊಡುಕೊಳ್ಳುವಿಕೆಯ ವ್ಯಾಪಾರವೇ ಆಗಿದೆ ಎಂಬುದರಲ್ಲಿ ಸಂಶಯವಿಲ್ಲ. ಸರಳವಾದ, ಚಿಂತನಾಶೀಲ ಲೇಖನ.
  ಧನ್ಯವಾದಗಳು.

  ReplyDelete
 2. ಅನಂತರಾಜರೆ,
  ಜಗವೆಲ್ಲ ಸ್ವಪ್ರೀತಿಯ ವ್ಯವಹಾರ ಎನ್ನುವುದನ್ನು ಚೆನ್ನಾಗಿ ಬಿಂಬಿಸಿದ್ದೀರಿ!

  ReplyDelete
 3. ಸರ್,ಲೆಖನ ನೈಜತೆಯಿ೦ದ ಕೂಡಿದೆ.

  ReplyDelete