Tuesday, April 26, 2011

ಸನ್ಮಾನ್ಯ ಶ್ರೀ

ರಾಜನೀತಿಯ ಹರಾಜು ಹಾಕುತ್ತಾ

ನೀತಿ ಸಂಹಿತೆಗಳ ಮಾರಣ ಹೋಮಕ್ಕೆ

ತೋರಣ ಕಟ್ಟುವವರು...

ವಂಚಿಸುವ ಲಂಚಗುಳಿಗಳ

ಸಂಚುಗೈಯುವವರ

ವಂದಿಸುವ ವಂದಿಮಾಗಧರು...

ನನಸಾಗದ ಕನಸುಗಳ

ಕುಣಿಕೆಗಳ ಹೆಣೆಯುತ್ತ

ಕುರುಚಲು ಭಾವಗಳಿಂದ

ಗೊಂದಲ ಮೂಡಿಸುವವರು...

ಸಾವಿನಾಚೆಯ ಸವಿ ತೋರುವೆವೆನ್ನುತ

ಭಾವಗಳ ಕಾವೇರಿಸಿ

ಕಾವಿಗಳ ಬಿಸಿ ಮಾಡಿಕೊಳ್ಳುವವರು...

ಗಲ್ಲಿಗಲ್ಲಿಯಲಿ ವೀರಗಾಸೆ ಕುಣಿಯುತ್ತ

ಕಂಡಲ್ಲಿ ಗುಂಡು ಹಾಕಿ

ಡಿಂಡಿಮ ಬಾರಿಸುವವರು...

ಬುದ್ಧಿಗೆ ಗೆದ್ದಲು ತುಂಬಿದ್ದರೂ

ಬುದ್ಧಿಮಟ್ಟವ ಅಳೆಯುವ

ಅಳತೆಗೋಲಾಗಿರುವವರು....

ಬೆತ್ತಲು ಮಾಂಸಕ್ಕೆ ಹದ್ದಿನ ಕಣ್ಣಾಗಿ

ಹರೆಯವ ಹರಿದು

ಹೋಳಾಗಿಸುವವರು...

ಮತಬೇಧವ ಮಾಡಿ

ಮತ ಯಾಚಿಸುತ

ಒಮ್ಮತವಿದೆಯೆಂದು ಉನ್ಮತ್ತರಾಗುವವರು...

ನಮ್ಮೆಲ್ಲರ ಧುರೀಣರಿವರು....

ಸರಣಿಯಲಿ ನಿಂತ ಗಣ್ಯರಿವರು

ಮಾನವೀಯತೆಯ ಕೊಂದ ಮಾನ್ಯರಿವರು

ಸನ್ಮಾನ್ಯರಿವರು.....!

27 comments:

  1. ಅನಂತರಾಜರೆ,
    ವರ್ತಮಾನದ ನಮ್ಮ ಗಣ್ಯರ ವೇಷವನ್ನು ಸೊಗಸಾಗಿ ಬಣ್ಣಿಸಿದ್ದೀರಿ. ಸುಂದರವಾದ ಕವನ.

    ReplyDelete
  2. ರಾಜಕಾರಿಣಿಗಳ ಕೌರ್ಯತೆಯನ್ನ ಚೆನ್ನಾಗಿ ಬಿಂಬಿಸಿದ್ದೀರಿ... ಅಂತವರಿಗೆ ಸಿಗುವ ಮಾನ್ಯತೆ ನಿಜಕ್ಕೂ ವಿಷಾದನೀಯ.
    ನಿಮ್ಮ ಕವನ ಚೆನ್ನಾಗಿದೆ..

    ReplyDelete
  3. ರಾಜಕಾರಣಿಗಳ ನಿಜವಾದ ಬಣ್ಣ ನಿಮ್ಮ ಕವನದಲ್ಲಿ ಚೆನ್ನಾಗಿ ಮೂಡಿದೆ ಸರ್

    ReplyDelete
  4. ರಾಜಕೀಯದವರಿಗಿರುವ ವಿಶೇಷಣಗಳ ಅರ್ಥವನ್ನು ಚೆನ್ನಾಗಿ ವಿವರಿಸಿದ್ದೀರಿ.
    Nice poem.

    ReplyDelete
  5. ರಾಜಾಕೀಯದ ವಿಶಿಷ್ಟತೆಯನ್ನ ತಿಳಿಸಿದ್ದೀರಿ... ಸುಂದರ ಕವನ ಧನ್ಯವಾದಗಳು

    ReplyDelete
  6. ನೈಜತೆಯಿಂದ ವಾಸ್ತವದ ಚಿತ್ರಣ.

    ReplyDelete
  7. ಅನಂತ ರಾಜ್ ರವರೆ,
    ಇಂದಿನ ನೈಜ ಚಿತ್ರಣ ನೀಡುವ ಕವನ. ತುಂಬಾ ಚೆನ್ನಾಗಿದೆ

    ReplyDelete
  8. ಸರ್‍,
    ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಮೂಡಿಬಂದಿರುವ ಈ ಕವನ ಚೆನ್ನಾಗಿದೆ.
    ಧನ್ಯವಾದಗಳು.

    ReplyDelete
  9. ಸರ್, ನಿಮ್ಮ ಸಿಟ್ಟನ್ನೆಲ್ಲಾ ಕವಿತೆಯಲ್ಲಿ ಹೊರಹಾಕಿದ್ದೀರಿ!!! ಏನು ಮಾಡುವುದು? ಅವರ ಕಿವಿಯೋ ಬಲು ಮಂದ!!! ಕಣ್ಣು ಕುರುಡು!!! ಈ ಸಂದೇಶ ಅವರಿಗೆ ಹೇಗೋ ತಲುಪಲಿ ಎಂದು ಆಶಿಸುತ್ತೇನೆ.

    ReplyDelete
  10. ಅನಂತ್ ಸರ್, ಸೊಗಸಾದ ರಾಜಕೀಯ ಕವನ !

    ReplyDelete
  11. @ಸುನಾತ್ ಸರ್ - ವರ್ತಮಾನದ ನಮ್ಮ ಗಣ್ಯರ ವೇಷವನ್ನು ಮೆಚ್ಚಿದ್ದೀರಿ. ಧನ್ಯವಾದಗಳು ಸರ್.

    ಅನ೦ತ್

    ReplyDelete
  12. ಆಶಾ ಅವರಿಗೆ - ರಾಜಕಾರಿಣಿಗಳ ಕ್ರೌರ್ಯತೆ, ಅವರಿಗೆ ಸಿಗುವ ಮಾನ್ಯತೆ ಮತ್ತು ಅದನ್ನು ಒಪ್ಪಿಕೊಳ್ಳುವ ನಮ್ಮ ದೌರ್ಭಾಗ್ಯತೆ - ಈ ದೇಶದ ದುರ೦ತದ ಕಥೆ.
    ಕವನವನ್ನು ಮೆಚ್ಚಿ ಬರೆದು ತಿಳಿಸಿದ ತಮಗೆ ಧನ್ಯವಾದಗಳು.

    ಅನ೦ತ್

    ReplyDelete
  13. @ ಗಿರೀಶ್ ಸರ್ - ರಾಜಕಾರಣಿಗಳ ಬದಲಾಗುವ ಬಣ್ಣಗಳಿಗೆ ಮತ್ತೆ ಮತ್ತೆ ಮರುಳಾಗುವ ಬಲಿಪಶುಗಳು ನಾವೇ ಅಲ್ಲವೆ? ಮೆಚ್ಚಿ ಬರೆದು ತಿಳಿಸಿದ ತಮಗೆ ಧನ್ಯವಾದಗಳು.

    ಅನ೦ತ್

    ReplyDelete
  14. @ ಮನಮುಕ್ತಾ ಮೇಡ೦ - ರಾಜಕೀಯದವರಿಗಿರುವ ವಿಶೇಷಣಗಳ ಅರ್ಥವನ್ನು ಹುಡುಕಲು, ಅವರ ವೈವಿಧ್ಯ ಬಯಲಾಟಗಳು ಪ್ರೇರೇಪಿಸುತ್ತವೆ..! ಮೆಚ್ಚಿ ಬರೆದು ತಿಳಿಸಿದ ತಮಗೆ ಧನ್ಯವಾದಗಳು.

    ಅನ೦ತ್

    ReplyDelete
  15. @ ಮಹಾಬಲಗಿರಿ ಭಟ್ ಹಾಗೂ ದಿನಕರ್ ಮೊಗೇರ - ಮೆಚ್ಚಿ ಬರೆದು ತಿಳಿಸಿದ ತಮಗೆ ಧನ್ಯವಾದಗಳು.

    ಅನ೦ತ್

    ReplyDelete
  16. ಮನಸು ತಾಣದ ಸುಗುಣ ಅವರಿಗೆ - ರಾಜಕೀಯದ ವಿಶಿಷ್ಟತೆಯಲ್ಲ ಮೇಡ೦ ಇದು ದುರಾಚಾರದ ಪರಾಕಾಷ್ಟೆ.. ಪಕ್ಷಗಳು ಬದಲಾದರೂ ವ್ಯವಸ್ಥೆ ಬದಲಾಗದು.. ಅಲ್ಲವೆ?
    ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ಅನ೦ತ್

    ReplyDelete
  17. ನೈಜ ಚಿತ್ರಣ.. ಎ೦ದು ಪ್ರತಿಕ್ರಿಯಿಸಿದ ಸತೀಶ್ ಹಾಗೂ ಮ೦ಜುಳಾದೇವಿಯವರಿಗೆ ಧನ್ಯವಾದಗಳು.

    ಅನ೦ತ್

    ReplyDelete
  18. ಚ೦ದ್ರೂ ಸರ್ - ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಮೂಡಿಬಂದಿರುವ ಈ ಕವನ ಭಾವ-ಚಿತ್ರಣವನ್ನು ಹೊರಹೊಮ್ಮಿಸುವಲ್ಲಿ ಸಾರ್ಥಕವಾಗಿದ್ದರೆ, ನನಗೂ ಸಾರ್ಥಕ್ಯಭಾವ.
    ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ಅನ೦ತ್

    ReplyDelete
  19. @ಸತ್ಯಪ್ರಸಾದ್ ಸರ್ - ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಸಂದೇಶ ತಲುಪುವುದು ಎ೦ಬ ನಿರೀಕ್ಷೆಯೇ.. ಭಾವಗಳನ್ನು ಹೊರಹೊಮ್ಮಿಸುವವರ ಆಶಾಭಾವ.

    ಧನ್ಯವಾದಗಳು
    ಅನ೦ತ್

    ReplyDelete
  20. @ಭಟ್ ಸರ್ - ಮೆಚ್ಚುಗೆಗೆ ಧನ್ಯವಾದಗಳು.
    @ರಾಘು ಸರ್ - ಮೆಚ್ಚುಗೆಗೆ ಧನ್ಯವಾದಗಳು, ತಮ್ಮ ತಾಣ ಸು೦ದರವಾಗಿದೆ.

    ಅನ೦ತ್

    ReplyDelete
  21. anant sir, raajakiyada ranatantravannu bahala sogasaagi mudisiddira,abhinandanegalu.

    ReplyDelete
  22. @ ಕವಿತಾ - ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು
    @ ಕಲಾವತಿ ಮೇಡ೦ - ಮೆಚ್ಚಿ ಅಭಿನ೦ದಿಸಿದ ತಮಗೂ ಧನ್ಯವಾದಗಳು

    ಅನ೦ತ್

    ReplyDelete
  23. Sir,nimma kavanavanthu tumbaa chennagide. hechinavaru nimma kavanavannu nodali antha nanna aase.

    ReplyDelete