Wednesday, August 25, 2010

ಒಂದು ಘಟನೆಯ ಸುತ್ತ...........

"ಬೆಳಿಗ್ಗೆಯಿಂದ ಒಂದೇ ಸಮನೆ ನಿನ್ನ ಕೆಲಸಗಳಲ್ಲೇ ಮುಳುಗೋದ್ರೆ... ನನ್ನ ಈ ಶರ್ಟ್ ನ ಪ್ರೆಸ್ ಮಾಡೋವ್ರು ಯಾರು ?" ಇವತ್ತು ತುಂಬಾ ಮುಖ್ಯವಾದ ಕಾನ್ಫೆರೆನ್ಸ್ ಇದೆ ಅಂತ ಹೇಳಿದ್ನಲ್ಲಾ...? ಉತ್ತರ ಬರಲಿಲ್ಲ. "ಈ ಮನೇಲಿ ಯಾರಾದ್ರೂ ಇದ್ದೀರೋ ಇಲ್ವೋ"..? ಧ್ವನಿಯಲ್ಲಿ ಸ್ವಲ್ಪ ಏರಿಕೆ ಕಂಡು ಬಂತು. ಮನೆಯಲ್ಲಿ ಇದ್ದ ಹೆಂಡತಿ ಮತ್ತು ಇಬ್ಬರು ಮಕ್ಕಳೂ ತಮ್ಮ ತಮ್ಮ ತಯಾರಿಯಲ್ಲಿ ಕಾರ್ಯ ಮಗ್ನರು. ಎಲ್ಲರೂ ಕಾಲೇಜು, ಕಾರ್ಯಾಲಯಕ್ಕೆ ಹೊರಡುವವರು. ಹೆಂಡತಿಯಿಂದ ನಿಧಾನವಾಗಿಯಾದರೂ ಬಂತು ಉತ್ತರ. "ಆಯ್ತು ಇವತ್ತು ಗಮನಿಸಲಿಲ್ಲ ರೀ..... ನನಗೂ ಹೊರಡುವ ಗಡಿಬಿಡಿ ಅಲ್ವಾ... ಇರಿ ಮಾಡಿಕೊಡುತ್ತೇನೆ..." ಅಲ್ಲಿಗೆ ಹರಿತ ಸಂಭಾಷಣೆ ಮುಗಿಯುವುದಿಲ್ಲ. ಪರಸ್ಪರ ಕೂಗಾಟ, ಮಕ್ಕಳ ಅಸಮಾಧಾನ ಇಡೀ ವಾತಾವರಣವನ್ನೇ ಕಲುಷಿತ ಮಾಡಿ ಬಿಡುತ್ತದೆ.

ಬೆಳಗಿನ ಈ ಚಿಕ್ಕ ಘಟನೆಯಿಂದ ಆ ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಆ ದಿನ ಅಂತಹ ಉತ್ತಮವಾಗೇನೂ ಇರುವುದಿಲ್ಲ. ಇಡೀ ದಿನ ಮನಸ್ಸು ಆ ಕಹಿ ಘಟನೆಯ ಸುತ್ತಲೂ ತಿರುಗುತ್ತಿರುತ್ತದೆ. ಇಲ್ಲಿ ತಪ್ಪು ಯಾರು, ಸರಿ ಯಾರು ಎಂದು ವಿಶ್ಲೇಷಣೆ ಮಾಡುವುದಕ್ಕಿಂತ ಈ ಘಟನೆಯಿಂದ ಮನೆಯ ಸದಸ್ಯರ ಮೇಲೆ ಆದ ಪರಿಣಾಮ, ಮಾನಸಿಕ ಕ್ಲೇಷೆ ಮತ್ತು ಇದು ಪುನರಾವರ್ತಿಸದಂತೆ ಮಾಡಿಕೊಳ್ಳಬಹುದಾದ ಮಾನಸಿಕ ಸಿದ್ಧತೆ, ಸ್ವಾಸ್ಥ್ಯದ ಬಗ್ಗೆ ಚಿಂತನೆ ಮಾಡುವುದು ಉತ್ತಮ ಅನ್ನಿಸುತ್ತದೆ.

ಇಲ್ಲಿ ಒಂದು ಘಟನೆಯನ್ನು ಸಮಗ್ರವಾಗಿ ನೋಡುವ ಮತ್ತು ವಿಶ್ಲೇಷಿಸುವ ಕಾರ್ಯ ನಡೆಯಬೇಕಾಗುತ್ತದೆ. ಘಟನೆಯ ಮೂಲ ಹುಡುಕುವ ಪ್ರಾಮಾಣಿಕ ಪ್ರಯತ್ನ ಪ್ರಾರಂಭ ಮಾಡಿದಾಗ ಮಾತ್ರವೇ ನಮಗೆ ನಮ್ಮಲ್ಲಿಯೇ ಸುಪ್ತವಾಗಿರುವ ಋಣಾತ್ಮಕ ಅಂಶಗಳು ಗೋಚರವಾಗಬಹುದು. ಕೊಡು-ಕೊಳ್ಳುವ ಪ್ರವೃತ್ತಿ ನಮ್ಮಲ್ಲಿ ಸದಾ ಜಾಗೃತವಾಗಿರುವ ಕಾರಣವೂ ಅದಾಗಿರಬಹುದು. ಸಾಧಕ-ಬಾಧಕಗಳನ್ನು ತಿಳಿದುಕೊಳ್ಳದೆಯೇ ಸ್ವಯಂ ತೀರ್ಪು ಕೊಡುವ ನಮ್ಮ ಮನೋವೃತ್ತಿ ಇಲ್ಲಿ ವಿಶೇಷ ಪಾತ್ರವನ್ನು ವಹಿಸಿರಬಹುದು. ಪ್ರತಿಯೊಂದು ಘರ್ಷಣೆಗೂ ಮೂಲ ಕಾರಣ ಮೇಲೆ ತಿಳಿಸಿದ ನಮ್ಮ ಋಣಾತ್ಮಕ ಅಂಶಗಳೇ ಆಗಿದ್ದಲ್ಲಿ ನಾವದನ್ನು ಪ್ರಯತ್ನ ಪೂರ್ವಕವಾಗಿ ತ್ಯಜಿಸುವ ಕಾರ್ಯವನ್ನು ಹಂತ ಹಂತವಾಗಿ ಹಮ್ಮಿಕೊಳ್ಳಬೇಕಾಗುತ್ತದೆ. ಧನಾತ್ಮಕ ದೃಢಸೂಚಕಗಳನ್ನು (ಪಾಸಿಟಿವ್ ಅಫರ್ಮೇಶನ್ಸ್) ಮನಸ್ಸಿಗೆ ನಿರಂತರವಾಗಿ ಅಭ್ಯಸಿಸುತ್ತಾ ಬಂದಲ್ಲಿ ಪ್ರತಿಯೊಂದು ಘಟನೆಯನ್ನೂ ನೋಡುವ ನಮ್ಮ ದೃಷ್ಟಿಕೋನದಲ್ಲೇ ಬದಲಾವಣೆಯನ್ನು ಖಂಡಿತಾ ನಿರೀಕ್ಷಿಸಬಹುದು. ಯಾವುದೇ ಒಂದು ಪ್ರದೇಶದಲ್ಲಾದರೂ ಧನಾತ್ಮಕ ತರಂಗಗಳು ನಿರಂತರವಾಗಿ ಹೊರ ಹೊಮ್ಮುತ್ತಿದ್ದರೆ ಅಲ್ಲಿ ಯಾವಾಗಲೂ ಹರ್ಷದಾಯಕ ಹಾಗೂ ಆಹ್ಲಾದಕರ ವಾತಾವರಣ ನಿರ್ಮಾಣವಾಗಿರುತ್ತದೆ.

ಅದೇ ಘಟನೆಯ ಪುನರಾವೃತ್ತಿಯಾದರೂ ಧನಾತ್ಮಕ ತರಂಗಗಳು ಆ ಮನೆಯಲ್ಲಿ ಹೊರಹೊಮ್ಮುತ್ತಿದ್ದರೆ ಪರಿಣಾಮ ಸುಂದರವಾಗಿರುತ್ತದೆ.

"ಬೆಳಿಗ್ಗೆಯಿಂದ ಒಂದೇ ಸಮನೆ ಎಲ್ಲಾ ಕೆಲಸಗಳನ್ನೂ ನೀನೊಬ್ಬಳೇ ಮಾಡ್ಕೋತಿದಿ.... ಇವತ್ತು ನನ್ನ ಈ ಶರ್ಟ್ ನ ನಾನೇ ಪ್ರೆಸ್ ಮಾಡ್ಕೊಳ್ತೀನಿ, ಒಂದು ಚಿಕ್ಕ ಕೆಲ್ಸನಾದ್ರೂ ಕಮ್ಮಿಯಾಗ್ಲಿ ನಿನಗೆ...." ಗಂಡನ ಮಾತಿಗೆ ಹೆಂಡತಿಯ ಉತ್ತರ... "ರೀ.... ದಿವ್ಸಾ ಇದೇ ರೀತಿ ಗಡಿಬಿಡಿ ಮಾಡ್ಕೊಂಡು ಬಿಡ್ತೀನಿ... ನಾಳೆ ಹೇಗಾದರೂ ಮಾಡಿ ಈ ಕೆಲ್ಸಕ್ಕೂ ಚೂರು ಸಮಯ ಹೊಂದಿಸ್ಕೊಳ್ತೀನ್ರೀ....." ಮತ್ತಷ್ಟು ಮಧುರ ಮಾತುಗಳ ವಿನಿಮಯವಾಗುತ್ತದೆ....

ಈ ಘಟನೆಯಿಂದ ಆ ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಆ ’ದಿನ’ ಉತ್ತಮವಾಗಿರುತ್ತದೆ ಹಾಗೂ ಇಡೀ ದಿನ ಮನಸ್ಸು ಉಲ್ಲಾಸಕರವಾಗಿರುತ್ತದೆ.......


18 comments:

 1. ಅದ್ಭುತವಾಗಿ ಘಟನೆಯೊಂದರ ಸುತ್ತ ನಡೆಯಬಹುದಾದ ಧನಾತ್ಮಕ ಮತ್ತು ಋಣಾತ್ಮಕ ಅ೦ಶಗಲ ಸಮಗ್ರ ವಿಶ್ಲೇಷಣೆ ಮಾಡಿದ್ದಿರಾ. ಘಟನೆಯ ಪರಿಣಾಮಗಳಿಗೆ ನಾವೇ ಹೊಣೆ. ಅದನ್ನು ಹೇಗೆ ಸ್ವೀಕರಿಸುತ್ತೆವೆಯೋ ಹಾಗೇ ಪರಿಣಾಮ ಎನ್ನುವದನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಿರಾ...
  ಈ ನಿಟ್ಟಿನಲ್ಲಿ ನೆಲ್ಲಿಕೆರೆ ವಿಜಯಕುಮಾರರ "ಅಶಿಸ್ತಿನಿಂದಿರಿ ನೆಮ್ಮದಿ ಹೊಂದಿ (ಶಿಸ್ತಿಗೊಂದು ಗುಡ್ ಬೈ)" ಈ ತರಹದ ಪುಸ್ತಕ (ಹೆಸರು ಸರಿಯಾಗಿ ನೆನಪಿಲ್ಲ) ಒಳ್ಳೆ ಜ್ಞಾನ ನೀಡುತ್ತದೆ.
  ಧನ್ಯವಾದಗಳು.

  ReplyDelete
 2. ಕೆಲವೊಮ್ಮೆ ಮನಸ್ಸಲ್ಲಿ ಧನಾತ್ಮಕವಾಗಿ ಚಿಂತಿಸಬೇಕೆಂದುಕೊಂಡರೂ ಒಮ್ಮೊಮ್ಮೆ ಕೈ ಮೀರುವುದುಂಟು.. ಹಸಿವೆ ಆದಾಗ, ನಿತ್ಯದ ಕೆಲಸಕ್ಕೆ ತಡ ಆದಾಗಲೆಲ್ಲ ಸಿಟ್ಟು ಸರ್ರ್ರ್ರ್ರ್ ಅಂತ ಬರತ್ತೆ. ಬಹಳ ಚೆನ್ನಾಗಿ ವಿಮರ್ಶಿಸಿದ್ದೀರಿ

  ReplyDelete
 3. ಯಾವುದೇ ಸ೦ದರ್ಭವನ್ನು ಯಾವ ರೀತಿ ಧನಾತ್ಮಕವಾಗಿ ಪರಿವರ್ತಿಸಿಕೊಳ್ಳಬಹುದು ಎ೦ಬುದನ್ನು ತು೦ಬಾ ಚೆನ್ನಾಗಿ ತಿಳಿಸಿದ್ದೀರಿ..ಉತ್ತಮ ಅ೦ಶಗಳನ್ನೊಳಗೊ೦ಡ ಲೇಖನ.ಧನ್ಯವಾದಗಳು.

  ReplyDelete
 4. ಹೌದು ಸರ್‍, ಕೆಲವೊಮ್ಮೆ ಈ ತರಹದ ಘಟನೆಗಳಿಂದಾಗಿ ಇಡೀ ದಿನ ಒಂದು ವಿಧದ ಚಡಪಡಿಕೆ ಇರುತ್ತದೆ. ಇಂತಹ ಘಟನೆಗಳು ಮನೆಯಲ್ಲಿನ ಇತರ ಸದಸ್ಯರ ಮೇಲೂ ಬೇರೊಂದು ರೀತಿಯ ಪ್ರಭಾವ ಬೀರುತ್ತದೆ. ಕ್ಷುಲ್ಲಕ ವಿಚಾರಗಳೇ ಕೆಲವೊಮ್ಮೆ ದೊಡ್ಡ ರಾದ್ಧಾಂತಗಳಿಗೂ ಕಾರಣವಾಗುತ್ತವೆ. ಚೆನ್ನಾಗಿ ವಿಶ್ಲೇಷಿಸಿದ್ದೀರಿ..
  ಧನ್ಯವಾದಗಳು.

  ReplyDelete
 5. ಬೆಳಿಗ್ಗೆಯೇ ನಡೆಯುವ ಒಂದು ಅಹಿತಕರ ಘಟನೆ ಇಡೀ ದಿನ ಮನೆಮಂದಿಯೆಲ್ಲರ ಮನಸ್ಸನ್ನೂ ಹಾಳು ಮಾಡುವುದೆಂಬುದನ್ನು ಚಿಕ್ಕದಾಗಿ ಉದಾಹರಣೆ ಸಮೇತ ವಿವರಿಸಿದ್ದೀರಿ ಅನಂತ್ ಸಾರ್... ! ಚೆನ್ನಾಗಿದೆ. ಆದರೆ ನಾವೆಲ್ಲರೂ ದಿನಾ ಏಳುವಾಗಲೇ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಕೆಲವು ಕ್ಷಣಗಳನ್ನು ವ್ಯಯಿಸಿದರೆ ಇಡೀ ದಿನ ನಾವೂ, ನಮ್ಮ ಸುತ್ತಲಿನವರೂ ಸಂತೋಷವಾಗಿಯೇ ಇರಬಹುದೆಂದು ಪರಿಣಾಮಕಾರಿಯಾಗಿ ಸೂಚಿಸಿದ್ದೀರಿ.... ಧನ್ಯವಾದಗಳು...

  ಶ್ಯಾಮಲ

  ReplyDelete
 6. ಬಹಳ ಚೆನ್ನಾಗಿ ಘಟನೆಯ ಪರಿವರ್ತನೆಯನ್ನು ಹೇಳಿದ್ದೀರಿ ಅನಂತರಾಜ್ ಸರ್, ಇದು ವ್ಯಕ್ತಿತ್ವ ವಿಕಸನದ ಬಗ್ಗೆ ಬರುವಂಥದ್ದು, ಈ ಥರದ ಕೆಲವು ಅಂಶಗಳನ್ನು ನಾನು ಹೇಳಲು ಪ್ರಯತ್ನಿಸಿದ್ದೆ, ಇನ್ನೂ ಬರೆಯಬೇಕಾಗಿದೆ,ನಿಮ್ಮ ಹೇಳಿಕೆ ಸ್ಪಷ್ಟವೂ ಸ್ಪುಟವೂ ಆಗಿದೆ, ಧನ್ಯವಾದಗಳು

  ReplyDelete
 7. ಘಟನೆಯ ಪರಿಣಾಮಗಳಿಗೆ ನಾವೇ ಹೊಣೆ. ಅದನ್ನು ಹೇಗೆ ಸ್ವೀಕರಿಸುತ್ತೆವೆಯೋ ಹಾಗೇ ಪರಿಣಾಮ ಎನ್ನುವದನ್ನು ತಿಳಿಸಿ ಉತ್ತಮವಾಗಿ ಪ್ರತಿಕ್ರಿಯಿಸಿದ ಸೀತಾರಾ೦ ಅವರಿಗೆ ವ೦ದನೆಗಳು.

  ಅನ೦ತ್

  ReplyDelete
 8. ಕೆಲವೊಮ್ಮೆ ಮನಸ್ಸಲ್ಲಿ ಧನಾತ್ಮಕವಾಗಿ ಚಿಂತಿಸಬೇಕೆಂದುಕೊಂಡರೂ ಒಮ್ಮೊಮ್ಮೆ ಕೈ ಮೀರುವುದು..ಬಹಳ ಚೆನ್ನಾಗಿ ವಿಮರ್ಶಿಸಿದ್ದೀರಿ ಎ೦ದು ಪ್ರತಿಕ್ರಿಯಿಸಿದ ಮನಮುಕ್ತಾ ಅವರಿಗೆ ಧನ್ಯವಾದಗಳು.

  ಅನ೦ತ್

  ReplyDelete
 9. ಕ್ಷುಲ್ಲಕ ವಿಚಾರಗಳೇ ಕೆಲವೊಮ್ಮೆ ದೊಡ್ಡ ರಾದ್ಧಾಂತಗಳಿಗೂ ಕಾರಣವಾಗುತ್ತವೆ. ಚೆನ್ನಾಗಿ ವಿಶ್ಲೇಷಿಸಿದ್ದೀರಿ ಎ೦ದು ಬರೆದು ತಿಳಿಸಿದ ಚ೦ದ್ರು ಅವರಿಗೆ ಧನ್ಯವಾದಗಳು.

  ಅನ೦ತ್

  ReplyDelete
 10. ನಾವೆಲ್ಲರೂ ದಿನಾ ಏಳುವಾಗಲೇ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಕೆಲವು ಕ್ಷಣಗಳನ್ನು ವ್ಯಯಿಸಿದರೆ ಇಡೀ ದಿನ ನಾವೂ, ನಮ್ಮ ಸುತ್ತಲಿನವರೂ ಸಂತೋಷವಾಗಿಯೇ ಇರಬಹುದೆಂದು ಪರಿಣಾಮಕಾರಿಯಾಗಿ ಸೂಚಿಸಿದ್ದೀರಿ ಎ೦ದು ಪ್ರತಿಕ್ರಿಯಿಸಿದ ಶ್ಯಾಮಲಾ ಅವರಿಗೆ ಧನ್ಯವಾದಗಳು.

  ಅನ೦ತ್

  ReplyDelete
 11. ಬಹಳ ಚೆನ್ನಾಗಿ ಘಟನೆಯ ಪರಿವರ್ತನೆಯನ್ನು ಹೇಳಿದ್ದೀರಿ, ಇದು ವ್ಯಕ್ತಿತ್ವ ವಿಕಸನದ ಬಗ್ಗೆ ಬರುವಂಥದ್ದು ಎ೦ದು ತಿಳಿಸಿದ್ದೀರಿ ಭಟ್ ಸರ್. ನಿಜ ಸರ್. ಧನಾತ್ಕಕ ತರ೦ಗಗಳು ಹೇಗೆ ಇಡೀ ವಾತಾವರಣವನ್ನೇ ಸ್ವಚ್ಛಗೊಳಿಸುತ್ತವೆ ಎನ್ನುವ ಕಾನ್ಸೆಪ್ಟ್ ಇಟ್ಟುಕೊ೦ಡು ಬರೆದ ಘಟನೆ.

  ಧನ್ಯವಾದಗಳು
  ಅನ೦ತ್

  ReplyDelete
 12. ಉತ್ತಮವಾದ ಬರಹ ಧನ್ಯವಾದಗಳು ಅನಂತರಾಜ್ ಸರ್.

  ವಸಂತ್

  ReplyDelete
 13. ಬರಹವನ್ನು ಮೆಚ್ಚಿದ ಕತ್ತಲೆ ಮನೆ, ವಸ೦ತ್ ಹಾಗೂ ಡಾ.ಗುರುಮೂರ್ತಿ ಅವರಿಗೆ ವ೦ದನೆಗಳು

  ಅನ೦ತ್

  ReplyDelete
 14. ಬರಹ ಚೆನ್ನಾಗಿದೆ. ಇನ್ನೂ ಹೆಚ್ಚು ಇಂತ ಲೇಖನಗಳು ನಿಮ್ಮಿಂದ ಬರಲಿ. ನಮಸ್ಕಾರಗಳು.

  ReplyDelete