Saturday, July 6, 2013

ದಿನಕರನ ಸೋ೦ಕು..

 
 














ಧರೆಯ ಅಲ೦ಪನು ಆರ್ದಿಸಿ
ರಾಚಿ-ವರ್ಷಿಸಿದ ಅವಭೃತ..ಧಾರೆ,
ಸುಳಿಗಾಳಿಯಲಿ ತಾಮಸನ ಅವಿರ್ಭವ,
ಅಭೂತ ಸೋ೦ಕಿಗೆ ತರು ತಳಮಳ
ಬೆಸೆದ, ಆಸರಿಸಿದ ಲತೆಯ ಕಳವಳ
ಗೂಡಿನಲಿ ಕಲರವವಿಲ್ಲ, ಗಾಢ ಮೌನ
ಹಸನಿಲ್ಲದ ಹಸಿರೆಲೆ, ನಲುಗಿದ ನೈದಿಲೆ
ಗೊನಿಸಿದ ಫಲಗಳು ತಿರೆಯಪ್ಪಿ, ನಿಷ್ಫಲ!
ಹನಿಸಿದ, ಹರಿಸಿದ ಜಲದಲಿ ಕ್ಷುದ್ರಛಾಯೆ
ಬಾನಲಿ ಚೀತ್ಕರಿಸುವ ಉರಿತಾರೆಯರು
ಚ೦ದಿರನ ತು೦ಬಿದ ಕಪ್ಪುಗುಳಿಗಳು
ಆರ್ಭಟದಲಿ ಸಿಲುಕಿದ
ಭುವಿಯ ಅಳಲು ಮುಗಿಲೇರಲು..
ಕಾರ್ಗತ್ತಲ ಕರಿಯವ್ವನ ಗರ್ಭಾ೦ಕುರಿಸಿ
ಜನುಮಿಸುವ ಅರುಣನ ಜತನಕೆ
ಜನಕನ ಆನಿಕೆ..
ತಿರೆಯ ಕಣಕಣದಲಿ ಛಾಯಳ ಬಿಸುಪು
ಮ೦ದಾನಿಲದಲಿ ಮ೦ದಾರನ ಛಾಪು
ಕಳೆಯೇರಿದ ತರು, ನಳನಳಿಸಿದ ಲತೆ
ಮೊಗವೆತ್ತಿ ಮುಗಿಲತ್ತ
ಚಿಲುಪಿಲಿಸಿದ ಕಲರವಕೆ
ದಿನಕರನ ಸೋ೦ಕು ತಗುಲಿದ ಧರೆ
ನಾಚಿ ಕೆ೦ಪಾದಳು, ಒಪ್ಪಿದಳು
ಅಲ೦ಪಿನಲಿ ಅಪ್ಪಿದಳು.......



ಚಿತ್ರಕೃಪೆ : ಅಂತರ್ಜಾಲ

10 comments:

  1. ಸುಂದರವಾದ ಕಲ್ಪನೆ, ಸುಂದರವಾದ ಕವನ. ಅಭಿನಂದನೆಗಳು.

    ReplyDelete
  2. ವ೦ದನೆಗಳು ಸುನಾತ್ ಸರ್..:)

    ReplyDelete
  3. ಅನಂತ್ ಸಾರ್; ಸುಂದರ ಸಾಲುಗಳು .ಅಭಿನಂದನೆಗಳು.

    ReplyDelete
    Replies
    1. ಮೆಚ್ಚಿ ಪ್ರತಿಕ್ರಿಯಿಸಿದ ಡಾ. ನಿಮಗೆ ಧನ್ಯವಾದಗಳು.

      Delete
  4. ಧನ್ಯವಾದಗಳು ಮನಸ್ಸು ತಾಣದವರಿಗೆ.....:)

    ReplyDelete
  5. ಬದುಕಿನ ಹೋರಾಟಗಳು "ತಾಮಸನ ಅವಿರ್ಭವ" ಎಂದುಕೊಂಡರೆ, ತಳಮಳಗೊಂಡು, ಘಾಸಿಯಾದ "ತರು"ವೆಂಬ ಮನಸ್ಸು, ಪ್ರವಾಹದಲ್ಲಿ ಸಿಕ್ಕಿದ ಒಂದು ಹುಲ್ಲು ಕಡ್ಡಿಯನ್ನೇ ಆಸರಿಸಿದೆಯೇನೋ... ಎಲ್ಲೆಲ್ಲೂ ಅಂಧಕಾರದ ಗಾಢ ಮೌನ, ತಲೆಯೆತ್ತಿದರೆ ಬಾನಲ್ಲೂ ಉರಿತಾರೆಯರು... ನಲುಗಿ, ಬಳಲಿ, ಅಳಲುತ್ತಾ ಜೀವ ಸಂರಕ್ಷಣೆಯ ಒಂದು ಬೆಚ್ಚನೆಯ ಕಿರಣದ ಸೋಂಕಿಗಾಗಿ ಕಾತರಿಸಿರುವ ಭುವಿ, ಮಂದಾನಿಲದ ಕಂಪು ಸೂಸಿದ ದಿನಕರನ ಆಗಮನಕ್ಕೆ ಕಣಕಣದಲ್ಲೂ ಹಂಬಲಿಸಿ ಅರಳಿದಳು. ಶುಭ್ರ, ಸ್ವಚ್ಛ ಹಾಗೂ ನಿರ್ಮಲ ಕಿರಣಗಳ ಸೋಂಕು ತಗುಲಿದಾಗ, ನಾಚಿ ಕೆಂಪಾದಳು, ಅರ್ಪಿಸಿಕೊಂಡಳು, ಒಪ್ಪಿಸಿಕೊಂಡಳು, ಅಲಂಪಿನಲಿ ಅಪ್ಪಿದಳು. ಆಶ್ವಾಸನೆಯ ಒಂದು ಸಂದೇಶಕ್ಕೆ, ಭರವಸೆಯ ಒಂದು ನುಡಿಗೆ, ದಿಕ್ಕೆಟ್ಟ ಮನಸ್ಸನ್ನು ದಿನಕರನ ಸೋಂಕಿಗೆ ಅರಳಿದ ಭುವಿಯಂತೆ ಅರಳಿಸುವ ಶಕ್ತಿಯಿದೆ ಅಲ್ಲವೇ..?
    ತುಂಬಾ ನೈಜವಾಗಿದೆ ಅನಂತ ಸಾರ್...

    ಶ್ಯಾಮಲ

    ReplyDelete
  6. saraLa...sundara... aapta.. kavana.....

    tumbaa chennaagide sir.... tumbaa ishTa aaytu...

    ReplyDelete
  7. anath sir, chendada kavanakkaagi
    dhanyavaadagalu.

    ReplyDelete
  8. ದಿನಕರನ ನೇರ ನೋಟಕ್ಕೆ ನಾಚಿ ಕೆಂಪಾದ ಧರಿತ್ರಿಯ ಸೊಬಗನ್ನ ತುಂಬಾ ಚೆನ್ನಾಗಿ ಬಣ್ಣಿ ಸಿದ್ದೀರಿ.. ಕಾವ್ಯ ಕೃಷಿ ನಿರಂತರ ಸಾಗಲಿ ಅನಂತ್.. ಜಿ..

    ReplyDelete