Thursday, May 2, 2013

ಕೃಷ್ಣ ಪ್ರಜ್ಞೆ

 


ಅರಿವು ಮೂಡುವ ಮೊದಲು ಆಧ್ಯಾತ್ಮದ ಹರವು ನಿರ್ದಿಷ್ಟವಾಗಿರುವುದಿಲ್ಲ.  ಬದುಕಿನ ಎಲ್ಲ ಮಜಲುಗಳನ್ನೂ ದಾಟುವ ಹಂತದಲ್ಲಿ ಈ ಒಳಹರವು ಅಂತರಂಗದಲ್ಲಿ ಉತ್ಥಾನಗೊಂಡಿರುವುದಿಲ್ಲ.  ಉಗಮ ನಿರ್ಗಮನಗಳ ನಡುವಿನ ಜೀವನವನ್ನು "ಸಾಹಸಗಾಥೆ" ಎಂದು ವರ್ಣಿಸಿಕೊಳ್ಳುವ ಜೀವಿಯು, ತನ್ನ ಹುಟ್ಟಿನ ಕಾರಣವನ್ನು ಅರಿಯುವುದೇ ಇಲ್ಲ.  ಸಾಮಾನ್ಯ ಜೀವಿಯ ಕಥೆ ಇದು. 

ಆಧ್ಯಾತ್ಮಿಕ ಬೆಳವಣಿಗೆಯ ಹಂತದಲ್ಲಿ "ಪದೋನ್ನತಿ’ ಹೊಂದುವ ಕಾರಣದಿಂದಲೇ ಜೀವಿಯ ಸೃಷ್ಟಿಯಾಗಿರುತ್ತದೆ.  ಜನ್ಮಾಂತರಗಳಲ್ಲಿ ಕರ್ಮಗಳ ಸುಳಿಯಲ್ಲಿಯೇ ಸಿಲುಕಿ ಈಸುತ್ತಾ ಪಯಣಿಸುವ ಜೀವಿ, ಮುಸುಕಿದ ಮಾಯೆಯಿಂದ ಬಿಡುಗಡೆಯಾಗುವುದೇ ಕಾಠಿಣ್ಯವಾಗಿರುತ್ತದೆ. ಜೀವ ಅನಾದಿಯಾದರೂ, ಪ್ರತಿ ಜನ್ಮದ ಜೀವಿತ ಕಾಲದಲ್ಲಿ ತುಂಬಿಸಿಕೊಳ್ಳುವ ಸರಕುಗಳು, ನವ ನವ ಜನ್ಮಗಳ ಉಗಮಕ್ಕೆ ನಾಂದಿಯಾಗುತ್ತದೆ.

ನವಜಾತ ಶಿಶು ಬೆಳೆದಂತೆಲ್ಲಾ ಲೌಕಿಕ ಪ್ರಪಂಚದ ಆಗು-ಹೋಗುಗಳನ್ನೂ, ಒಳಿತು-ಕೆಡಕುಗಳನ್ನೂ, ಬೇಕಾಗಿರಲಿ ಬೇಡವಾಗಿರಲಿ, ತನ್ನೊಳಗೆ ತುಂಬಿಸಿಕೊಳ್ಳುತ್ತಾ ನಡೆಯುತ್ತದೆ.  ಅದೆಷ್ಟೊಂದು ಲೌಕಿಕ ವಿಚಾರಗಳಲ್ಲಿ ಮುಳುಗಿ ಬಿಡುತ್ತದೆಂದರೆ ತಾನು ಬಂದ ಕಾರಣವನ್ನೇ ಮರೆತು ಭ್ರಮಾ ಲೋಕದಲ್ಲಿ ಶಾಶ್ವತವಾಗಿ ಉಳಿಯುವ ಹಂತಕ್ಕೆ ತಲುಪಿಯೂ ಬಿಡುತ್ತದೆ.  ನಾವು ಹಿಂದಿನ ಜನ್ಮಗಳಲ್ಲಿ ಮಾಡಿದ್ದ ಕರ್ಮ ಫಲಗಳನ್ನನುಭವಿಸುತ್ತಾ ಅಂತರಂಗದಾಳದಲ್ಲಿನ ಮಾನಸ ಸರೋವರದಲ್ಲಿ ನಿರಂತರವಾಗಿ ಏಳುವ ತರಂಗಗಳ ಸುಳಿಯಲ್ಲಿ ಕೊಚ್ಚಿ ಹೋಗುತ್ತಿರುತ್ತೇವೆ.   ಈ ಭಾವ ತರಂಗಗಳ ರಿಂಗಣದಲ್ಲಿ ಎಲ್ಲವೂ ಸಕಾರಾತ್ಮಕವಾಗಿಯೇ ಇರುತ್ತದೆಂಬ ನಂಬಿಕೆಯೇನೂ ಇಲ್ಲ.  ನಮ್ಮ ಸುತ್ತಲೂ ಇರುವ ಭಾವಗಳ ಜೊತೆಗೆ ಅನಿವಾರ್ಯವಾಗಿ ನಾವು ಸದಾ ಒಡನಾಡುತ್ತಲೇ ಇರುವಾಗ, ಎಲ್ಲಿಂದ, ಹೇಗೆ, ಯಾವಾಗ, ಯಾಕೆ ಋಣಾತ್ಮಕ ಭಾವಗಳು ನಮ್ಮೊಳಗೆ ನುಸುಳಿ ಬಿಡುವುದೋ ತಿಳಿಯುವುದೂ ಇಲ್ಲ.  ಮಾನಸ ಸರೋವರದ ತಿಳಿನೀರು ತರಂಗಗಳ ಸುಳಿಯಲ್ಲಿ ಸಿಕ್ಕು, ಗಿರಗಿರನೆ ಸುತ್ತಲು ಶುರುವಾದಾಗ ವಿಷಪೂರಿತವಾದ ಏಳು ಹೆಡೆಯ ಕಾಳಿಂಗ ಸರ್ಪವೇ ಆಗಿರುತ್ತದೆ.  ಸುಡುವ ವಿಷಾನಿಲವನ್ನು ನಮ್ಮೆಡೆಗೇ ಫೂತ್ಕರಿಸುತ್ತಿರುತ್ತದೆ. 

ಹೀಗೆ ರಾಕ್ಷಸ ಪ್ರವೃತ್ತಿಯ ತಾಮಸ ಗುಣಗಳು ನಮ್ಮನ್ನು ಆಕ್ರಮಿಸಿಕೊಂಡಾಗ, ನಮಗೆ ಒಂದು ಸಾತ್ವಿಕ ಎಚ್ಚರಿಕೆಯ ಧ್ವನಿ, ತುಂಬಾ ಮೃದುವಾದ, ಕೋಮಲ ತರಂಗವೊಂದರಿಂದ ಅರಳ ಬೇಕಾದ ಅವಶ್ಯಕತೆ ಬರುತ್ತದೆ.  ಹೀಗೆ ಅರಳುವ, ನಮ್ಮನ್ನು ತಾಮಸಿಕ ಆಂದೋಲನದಿಂದ ಹೊರಗೆಳೆಯಬಹುದಾದ ಶಕ್ತಿ ಅಥವಾ ಪ್ರಜ್ಞೆ - ಅದುವೇ "ಕೃಷ್ಣ ಪ್ರಜ್ಞೆ".  ಕೃಷ್ಣ ಧನಾತ್ಮಕ ಶಕ್ತಿಯಾದರೆ, ನಮ್ಮ ಬುದ್ಧಿ, ವಿವೇಕದ ಶಕ್ತಿ.  ನಮ್ಮೊಳಗಿನ ತರಂಗಗಳಲ್ಲಿ ಯಾವುದು ನಮ್ಮನ್ನು ಸಾತ್ವಿಕತೆಯ ಹಾದಿಗೆ ಕೊಂಡೊಯ್ಯುವುದು ಎಂಬುದರ ಅರಿವು ನಮಗೆ ಬರುವುದೇ "ಕೃಷ್ಣ ಪ್ರಜ್ಞೆ".  ಶ್ರೀ ಕೃಷ್ಣ ಪರಮಾತ್ಮ ಕಾಳಿಂಗ ಸರ್ಪದ ಮೇಲೆ ನಿಂತು ಮರ್ಧಿಸಿದನೆಂದರೆ, ಅದರ ಅರ್ಥ ಋಣಾತ್ಮಕ ಭಾವಗಳನ್ನೂ, ತಮಸ್ಸನ್ನೂ, ಪುಟ್ಟ ಕೃಷ್ಣ ತಾನೇ ಧನಾತ್ಮಕ ಭಾವವಾಗಿಯೂ, ಸಾತ್ವಿಕದ ಸಂಕೇತವಾಗಿಯೂ ತುಳಿದು ಧ್ವಂಸ ಮಾಡಿದನೆಂದಾಗುತ್ತದೆ.

ಬದುಕಿನ ಸಂಕ್ರಮಣ ಕಾಲದಲ್ಲಿ, ಪುಣ್ಯ ಶೇಷದಿಂದ ಮಾತ್ರವೇ ಅರಿವಿಗೆ ಲಭ್ಯವಾಗುವ ’ಕೃಷ್ಣಪ್ರಜ್ಞೆ’ ಎನ್ನುವ ’ಆಪ್ತಭಾವ’ ಬಾಳ ಪಯಣದ ಹಾದಿಯಲ್ಲಿ ಸಂಗಾತಿಯಾದರೆ, ಅಭಿಮಾನದ ಎಲ್ಲೆಯನ್ನು ಮೀರಿ ದಿಗಂತದಲ್ಲಿ ವ್ಯಾಪ್ತಿಸಿ, ಅನಂತದೆಡೆಗೆ ಸಾಗುವ ದಿಸೆಯಲ್ಲಿ ಪಯಣಿಸುವ ಸುಜೀವಗಳಿಗೆ, ಅದು ಜೀವನಾಡಿಯಾಗುತ್ತದೆ.  ಕೃಷ್ಣನ ಸೆಳವಿಗೆ ಸಿಲುಕಿದಲ್ಲಿ ಮಾತ್ರವೇ ಉತ್ಕೃಷ್ಟವಾದ ದೈವಿಕ ಪ್ರೇಮ-ಭಾವ ಅಂತರಂಗದಲ್ಲಿ ಅಂಕುರವಾಗಿ, ಬದುಕು ಹೃದಯಂಗಮವಾಗುತ್ತಾ, ಆಧ್ಯಾತ್ಮದ ಒಳಹರವು ಉತ್ಥಾನಗೊಂಡು ಅಲೆಅಲೆಯಾಗಿ ಹರಿಯಲಾರಂಭಿಸುತ್ತದೆ.  ಜೀವದ ಪ್ರತಿ ನಡೆ "ಕೃಷ್ಣನೆಡೆ"ಗೆ ಸಾಗುತ್ತದೆ.  ಕೃಷ್ಣನಲ್ಲಿ ಕರ್ಷನಾಗುತ್ತಾ "ಪದೋನ್ನತಿ" ಹೊಂದುವುದು ಮಾತ್ರವಲ್ಲದೆ, ಅಂತರಂಗದಿ ಉಕ್ಕಿ ಹರಿಯುವ ಭಾವಗಳ ಅಲೆಗಳೆಲ್ಲಾ, ಪ್ರೇಮಮಯವಾಗುತ್ತದೆ.  ಭಕ್ತಿಯೆಂಬ ’ನವಿಲು’ ಗರಿಬಿಚ್ಚಿ ನರ್ತಿಸಲಾರಂಭಿಸುತ್ತದೆ. 

"ಹರಿಯ ನೆನೆಯದ ನರಜನ್ಮವೇಕೆ" ಎಂಬ ದಾಸವಾಣಿಯಂತೆ ಜನ್ಮ ಸಾರ್ಥಕ ಮಾಡಿಕೊಳ್ಳಬೇಕಾದರೆ ಹರಿಯ ಒಲವನ್ನು ಗಳಿಸುವ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡೋಣ.  ನೆನೆದವರ ಮನದಲ್ಲಿ ಒಲವಿನ ತಂಗಾಳಿಯಾಗಿ ಬರುವ ಪ್ರಜ್ಞೆಯೇ ’ಕೃಷ್ಣಪ್ರಜ್ಞೆ’.  "ಸುಲಭನೋ ಹರಿ" ಎಂದ ದಾಸರ ನುಡಿಯಂತೆ ಶುದ್ಧ ಭಕ್ತಿಯ ಮಾರ್ಗದಲ್ಲಿ ನಡೆಯುತ್ತಾ ಕೃಷ್ಣಪ್ರಜ್ಞೆಯನ್ನು ಬೆಳೆಸುವುದೇ ನಮ್ಮ ಗುರಿಯಾಗಿಸಿಕೊಳ್ಳೋಣ.ಚಿತ್ರಕೃಪೆ : ಅಂತರ್ಜಾಲ4 comments:

 1. ನಿಮ್ಮ ಲೇಖನ ಆಧ್ಯಾತ್ಮಿಕ ದೀಪಿಕೆಯಾಗಿದೆ. ಅನಂತ ಧನ್ಯವಾದಗಳು.

  ReplyDelete
 2. ಕೃಷ್ಣನೆಂಬುದೇ ದೊಡ್ಡ ಆಕರ್ಷಣೆ ..ಅವನೆಡೆಗೆ ಮತ್ತೆ ಸೆಳೆದ ತಮಗೆ ವಂದನೆಗಳು

  ReplyDelete
 3. ananth sir, aadhyaatmika
  maahitigaagi dhanyavaadagalu.

  ReplyDelete
 4. ananth sir,aadhyaatmika
  maahitigaagi dhanyavaadagalu.

  ReplyDelete