Thursday, March 22, 2012

ನವಮಿ ದಿನದಲಿ ರಾಮ ಬಂದನು...





ನವಮಿ ದಿನದಲಿ ರಾಮ ಬಂದನು
ಅವನಿಗೆಲ್ಲಾ ಚೆಲುವ ತಂದನು .... ಪ

ಬಿಚ್ಚಿ ಕುಸುಮದ ಎಸಳು ಎಸಳಲಿ
ಹಚ್ಚ ಹಸುರಿನ ಚಿಗುರು ಎಲೆಯಲಿ
ಸ್ವಚ್ಛ ತರುವಿನ ದಟ್ಟ ನೆರಳಲಿ
ಅವನಿಗೆಲ್ಲಾ ಚೆಲುವ ತಂದನು ... ೧

ನಲಿದು ಉಲಿಯುವ ಇಂಪು ಗಾನದಿ
ಮಂದ ಮರುತನ ತಂಪು ಸ್ಪರ್ಶದಿ
ಮಂದ್ರ ರಾಗದ ಭಾವ ಅಲೆಯಲಿ
ಅವನಿಗೆಲ್ಲಾ ಚೆಲುವ ತಂದನು ...೨

ಚಂದ್ರ ಶೀತಲ ತನುವು ಕೋಮಲ
ಸಾಂದ್ರ ಚೆಲುವಿಗೆ ಮೆರಗು ಅಸದಳ
ನಲಿದ ಭೃಂಗದ ಒಲವ ಒಸಗೆಲಿ
ಅವನಿಗೆಲ್ಲಾ ಚೆಲುವ ತಂದನು ...೩

ಇಳೆಯು ಹರಡಿದ ಹಸಿರು ಶಾಲಿಗೆ
ಗೆಳೆಯ ಗಗನಕೆ ನೀಲ ಹೊದ್ದಿಕೆ
ಮಳೆಯ ಮೇಘವು ಬಾನ ಚುಂಬಿಸೆ
ಅವನಿಗೆಲ್ಲಾ ಚೆಲುವ ತಂದನು ...೪

ಗಿರಿಯ ಸಾಲಿನ ನಡುವೆ ಬಳಕುತ
ತೊರೆಯು ಹರಿಯಿತು ಹರುಷ ಉಕ್ಕುತ
ಧರೆಯ ಒಡಲನು ಬಿಡದೆ ಬಳಸುತ
ಅವನಿಗೆಲ್ಲಾ ಚೆಲುವ ತಂದನು ...೫

ನವಮಿ ದಿನದಲಿ ರಾಮ ಬಂದನು
ಅವನಿಗೆಲ್ಲಾ ಚೆಲುವ ತಂದನು ...ಪ

https://soundcloud.com/stream

ಚಿತ್ರಕೃಪೆ : ಅಂತರ್ಜಾಲ

19 comments:

  1. ಚೈತ್ರಕ್ಕೊಂದು ಚೆಲುವಾದ ಕವನ. ರಾಮ ಬಂದಾಗ ಭುವಿಯಲ್ಲಿ ಸಂತಸ ತುಂಬಿರುವುದನ್ನು ಚೆನ್ನಾಗಿ ಬಿಂಬಿಸಿರುವಿರಿ. ಧನ್ಯವಾದಗಳು.

    ReplyDelete
    Replies
    1. ಯುಗಾದಿಯ೦ದು ಉಗಮವಾಗುವ ಚೈತ್ರಮಾಸ ಶ್ರೀರಾಮನ ಮಾಸವೇ ಆಗಿದೆ. ತಮ್ಮ ಅತ್ಮೀಯ ಪ್ರತಿಕ್ರೆಯೆಗೆ ಧನ್ಯವಾದಗಳು ಹಾಗೂ ನ೦ದನ ಸ೦ವತ್ಸರದ ಯುಗಾದಿಯ ಶುಭಾಶಯಗಳು.

      ಅನ೦ತ್

      Delete
  2. ವಸಂತಾಗಮನವೆಂದರೆ ಶ್ರೀರಾಮನ ಆಗಮನ... ಭಗವಂತ ಬರುತ್ತಾನೆಂಬ ಸೂಚನೆ ಕೊಡುವುದಕ್ಕೇನೋ ಎಂಬಂತೆ ಪ್ರಕೃತಿ ಮಾತೆಯಲ್ಲಾಗುವ ಬದಲಾವಣೆಗಳನ್ನು, ಸುಂದರವಾಗಿ ವರ್ಣಿಸಿದ್ದೀರಿ ಅನಂತ್ ಸಾರ್. ವಸಂತಮಾಸವೆಂದ ಕೂಡಲೇ ಕೋಗಿಲೆ ಕೂಗಲು ಪ್ರಾರಂಭಿಸುತ್ತದೆ, ವಸುಂಧರೆ ಹಸಿರುಟ್ಟು ನಲಿಯುತ್ತಾಳೆ, ತೊರೆ ಹರುಷ ಉಕ್ಕಿಸುತ್ತಾ, ಗಿರಿಗಳ ಸಾಲಿನ ನಡುವೆ ಬಳುಕುತ್ತಾ, ಧರೆಯ ಒಡಲನ್ನೆಲ್ಲಾ ಆವರಿಸಿಕೊಳ್ಳುವ ಭಾವವೇ ಪುಳಕಿತಗೊಳಿಸುತ್ತೆ. ನಮ್ಮ ಮನಸ್ಸನಲ್ಲೂ ಹೊಚ್ಚ ಹೊಸ ಭಾವಗಳು ಚಿಗುರೊಡೆದು ಮುದಗೊಳಿಸುವಂತಿದೆ ನಿಮ್ಮ ಕವನ. ಪದಗಳ ಜೋಡಣೆ ಲಾಲಿತ್ಯದಿಂದ ಕೂಡಿದೆ. "ನಂದನ" ಸಂವತ್ಸರದ ಉತ್ತಮ ಪ್ರಾರಂಭ.. ಧನ್ಯವಾದಗಳು ಮತ್ತು ಉಗಾದಿಯ ಹಾರ್ದಿಕ ಶುಭಾಶಯಗಳು.

    ಶ್ಯಾಮಲಾ

    ReplyDelete
    Replies
    1. ಪ್ರಕೃತಿಯ ಬದಲಾವಣೆ ಜೀವಗಳಲ್ಲೂ ಬದಲಾವಣೆಯನ್ನು ತರುತ್ತದೆ. ’ಜೀವ’ ಪ್ರಕೃತಿಯ ಕೂಸು ಎನ್ನುವುದು ಇಲ್ಲಿ ನಿದರ್ಶನವಾಗುತ್ತದೆ. ’ಹೊಸ ಭಾವಗಳು ಚಿಗುರೊಡೆದು ಮುದಗೊಳಿಸುತ್ತವೆ’ ಎ೦ದು ಆತ್ಮೀಯವಾಗಿ ಪ್ರತಿಕ್ರಿಯಿಸಿದ್ದೀರಿ. ಧನ್ಯವಾದಗಳು ಶ್ಯಾಮಲಾ. ನ೦ದನ ಸ೦ವತ್ಸರವು ಬಾಳನ್ನು ನ೦ದನಮಯವನ್ನಾಗಿಸಲಿ. ಯುಗಾದಿಯ ಹಾರ್ಧಿಕ ಶುಭಾಶಯಗಳು.

      ಅನ೦ತ್

      Delete
  3. chandada kavana.. haage haadikollabahudu...ಶುಭಾಶಯಗಳು.

    ReplyDelete
    Replies
    1. ಯುಗಾದಿಯ ಶುಭಾಶಯಗಳು ವಿಜಯಶ್ರೀ ಅವರಿಗೆ. ಕವನ ಹಾಡಿಕೊಳ್ಳುವ ಧಾಟಿಯಲ್ಲಿದ್ದರೆ, ಭಾವದ ಜೊತೆಗೆ ರಾಗವನ್ನು ಸೇರಿಸಬಹುದು ಅಲ್ಲವೆ? ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

      ಅನ೦ತ್

      Delete
  4. ಚೆಂದದ ಕವನ.ಹಬ್ಬದ ಶುಭಾಶಯಗಳು.

    ReplyDelete
    Replies
    1. ಯುಗಾದಿಯ ಶುಭಾಶಯಗಳು ಡಾ. ಸರ್. ಚೆ೦ದದ ಕವನವೆ೦ದು ಮೆಚ್ಚಿ ಬರೆದಿದ್ದೀರಿ. ಧನ್ಯವಾದಗಳು ಸರ್.

      ಅನ೦ತ್

      Delete
  5. ನಿಮ್ಮ ಈ ಯುಗಾದಿ ಉಡುಗೊರೆಗಾಗಿ ಧನ್ಯವಾದಗಳು. ಹೊಸ ವರುಷದಲ್ಲಿ ಭಗವಂತ ನಿಮ್ಮಿಂದ ಇನ್ನಷ್ಟು ಕವನಗಳು ಮೂಡಿಬರುವಂತೆ ಮಾಡಲಿ ಎಂದು ನಮ್ಮ ಹಾರೈಕೆ

    ReplyDelete
    Replies
    1. ನಿಮ್ಮ ಈ ಅಭಿಮಾನ ಪೂರ್ವಕ ಹಾರೈಕೆಗೆ ಧನ್ಯವಾದಗಳು ಪ್ರಕಾಶ್. ತಮಗೂ ಹಬ್ಬದ ಶುಭಾಶಯಗಳು.

      ಅನ೦ತ್

      Delete
  6. ವಸಂತನ ಆಗಮನವೂ ಪುರುಷೋತ್ತಮನ ಆಗಮನವೂ ಒಂದೇ. ವಸಂತ ಕಾಲದ ಪ್ರಕೃತಿಯಂತೆ ರಾಮನೂ ಅಸದಳ ಚಲುವ.

    ನವಮಿಯ ಆರಂಭಕೆ ಅತ್ಯುತ್ತಮ ಕವನ ಪುಷ್ಪಾರ್ಚನೆ ಪಠನ ಮಾಡಿದ ಮನೋ ವಿಕಸನವಾಯ್ತು. ಕವನ ಹಲ ಪ್ರಕಾರದ ಹೂಗಳಿರುವ ಉದ್ಯಾನದಂತೆ ಚೇತೋಹಾರಿಯಾಗಿದೆ.

    ಧನ್ಯವಾದಗಳು.

    ReplyDelete
    Replies
    1. ಮೆಚ್ಚಿ ಬರೆದು ತಿಳಿಸಿದ ಬದರಿ ಅವರಿಗೆ ಧನ್ಯವಾದಗಳು. ಕವನದ ಉದ್ದೇಶ, ಭಗವ೦ತನ ಆಗಮನದಿ೦ದ ಪ್ರಕೃತಿಯಲ್ಲಿ ಬದಲಾವಣೆ ಉ೦ಟಾಯಿತು ಎ೦ದು ಹೇಳುವುದೇ ಆಗಿದೆ. ಧನ್ಯವಾದಗಳು ಮತ್ತು ಉಗಾದಿಯ ಹಾರ್ದಿಕ ಶುಭಾಶಯಗಳು.

      ಅನ೦ತ್

      Delete
  7. ಶ್ರೀರಾಮಚಂದ್ರನ ಸ್ವಾಗತವನ್ನು ಸುಂದರವಾದ ಕವನಮಾಲೆಯಿಂದ ಮಾಡಿರುವಿರಿ. ಯುಗಾದಿಯ ಶುಭಾಶಯಗಳು. ಹೊಸ ಸಂವತ್ಸರ ನಿಮಗೆ ಸುಖ,ಶಾಂತಿ ಹಾಗೂ ಯಶಸ್ಸನ್ನು ತರಲಿ.

    ReplyDelete
    Replies
    1. ನಿಮಗೂ ನ೦ದನ ನಾಮ ಸ೦ವತ್ಸರದ ಶುಭಾಶಯಗಳು ಸುನಾರ್ ಸರ್. ಕವನವನ್ನು ಮೆಚ್ಚಿ ಬರೆದು ತಿಳಿಸಿದ್ದೀರಿ. ಧನ್ಯವಾದಗಳು.

      ಅನ೦ತ್

      Delete
  8. ಚಲುವ ತಂದನು ರಾಮ ಎನ್ನುವ ವಿವಿಧ ಆಯಾಮಗಳ ಅನಾವರಣ ಇಷ್ಟವಾಯ್ತು ಸರ್

    ReplyDelete
    Replies
    1. ಪ್ರಕೃತಿಗೆ ಚೆಲುವ ತರುವ ರಾಮನ ಆಗಮನಕ್ಕೆ ವಸ೦ತ ಉತ್ಸುಕನಾಗುವ ವೈಭವವನ್ನು ಮೆಚ್ಚಿಕೊ೦ಡು ಬರೆದು ದಾಖಲಿಸಿದ ತಮಗೆ ಧನ್ಯವಾದಗಳು ಸರ್.

      ಅನ೦ತ್

      Delete
  9. ಸರ್‍, ಚೈತ್ರಾಗಮನದ ಜೊತೆಗೆ ಶ್ರೀರಾಮನ ದರ್ಶನವನ್ನೂ ಕೊಡಿಸಿದಿರಿ ಎನ್ನಬಹುದು. ನಿಮಗೂ ಯುಗಾದಿಯ ಶುಭಾಶಯಗಳು.

    ಚಂದ್ರು

    ReplyDelete
    Replies
    1. ಮೆಚ್ಚಿ ಬರೆದು ತಿಳಿಸಿದ ತಮಗೆ ಧನ್ಯವಾದಗಳು ಚ೦ದ್ರು.. ಹಾಗೂ ರಾಮನವಮಿಯ ಶುಭಾಶಯಗಳು.

      ಅನ೦ತ್

      Delete
  10. nandana samvtsarake Anadara
    sundara kavana.nimage
    shubhaashayagalu,haagu
    dhanyavaadagalu.namma blog ge banni.

    ReplyDelete