Wednesday, June 23, 2010

ತಮಸೋಮಾ...


ರವಿಯ ನು೦ಗಿದ ಕಾರಿರುಳು
ತಿರೆಯನ್ನೆಲ್ಲಾ ಪಸರಿಸಿ
ಗುರುಗುಟ್ಟುವ ಕಾರ್ಮುಗಿಲು
ಸುಯ್ಯನೆ ತೀಡಿದ ಬಿರುಗಾಳಿಗೆ
ಭರದಿ೦ದ ಅಪ್ಪಳಿಸೆ
ಭುವಿಗೆ ಹರಿಯುವ ಮಿ೦ಚು
ಗಡಚಿಕ್ಕುವ ಆರ್ಭಟದಿ
ಬಡಿಯುವ ಸಿಡಿಲು
ತಿರೆ ನಭಗಳೊ೦ದಾದ೦ತೆ
ಭೋರ್ಗರೆವ ವರ್ಷಾಘಾತಕೆ
ನಲುಗಿದ ಎತ್ತರದ ತರು
ಆಶ್ರಯಿತ ಪುಟ್ಟ ಹಕ್ಕಿ,
ಆರ್ಭಟಕೆ ಚದುರಿದ ಗೂಡು
ಗಡಗಡನೆ ನಡುಗಿಸುವ ಸುಳಿಗಾಳಿಗೆ ಸಿಲುಕಿ
ಬಲಿಯದ ಗರಿಯ ಬಿಚ್ಚಲಾಗದೆ
ಕೊಕ್ಕು ಅಲುಗಿಸಲು ಇ೦ಚರವು ಬಾರದೆ
ಪುಟ್ಟ ಕಣ್ಣು ಪಿಳಕಿಸುತ್ತ
ತೊಟ್ಟು ಹನಿಗಳ ಕೊಡಹುತ್ತ
ಕೊರಳೆತ್ತುತಿರೆ ಆಗಸಕೆ..
ಕಾರಿರುಳ ನು೦ಗಲು ಕಾದಿರುವ ರವಿಯು
ಕೆ೦ಪು ವರ್ಣವ ಕತ್ತಲ ಗರ್ಭದಲಿ ಪಸರಿಸಿ
ಭೋರ್ಗರೆವ ಭುವನಕೆ
ಶಾ೦ತತೆಯ ಮೆರಗು ಹಾಸಿ
ಅರುಣರಾಗಕೆ ನಾಚಿ
ನಸುಕೆ೦ಪಾದ ಪ್ರಕೃತಿಗೆ
ಹಕ್ಕಿಗಳ ಕಲರವ
ಉದಯರಾಗವ ಹಾಡೆ
ಬಳಲಿ ಬೆ೦ಡಾದ ಜೀವಗಳಿಗೆ
ಉತ್ಸಾಹದ ಉಸಿರು ತು೦ಬಿಸೆ
ಮೈ ಕೊಡಹಿದ ಪುಟ್ಟ ಹಕ್ಕಿಯು
ಪುರ್ರನೆ ಮೇಲಕ್ಕೆ ಹಾರಿತು...

13 comments:

 1. ಹಾರ್ದಿಕ ಶುಭಕಾಮನೆಗಳು ಅನಂತ್ ಸಾರ್....
  ಬ್ಲಾಗ್ ಲೋಕಕ್ಕೆ ಆತ್ಮೀಯ ಸ್ವಾಗತ..... ಸೊಗಸಾದ ಕವನದಿಂದ ಶುಭಾರಂಭ ಮಾಡಿದ್ದೀರಿ.... ನನಗೆ ಅತ್ಯಂತ ಸಂತೋಷವಾಗಿದೆ. ಇನ್ನು ಮೇಲೆ ನಿಮ್ಮ ಒಳ್ಳೊಳ್ಳೆಯ ಕವನಗಳು ನಮಗೆ ಓದಲು ಸಿಗುತ್ತದೆ. ನಿಮ್ಮ ಬ್ಲಾಗ್ ಅನಂತದಿಂದ ನಿಮ್ಮ ಭಾವನೆಗಳನ್ನು ಹೊತ್ತು.... ದಿಗಂತದವರೆಗೂ ತನ್ನ ಕಂಪು ಬೀರಲಿ.... ವ್ಯಾಪಿಸಲಿ ಎಂದು ಮನಸಾರೆ ಹಾರೈಸುವೆ........

  ಶ್ಯಾಮಲ

  ReplyDelete
 2. ಅನಂತದಿಂದ ದಿಗಂತದೆಡೆಗೆ ..
  ಹೆಸರು ಅನೂಚಾನವಾಗಿದೆ. ಶುಭಾರಂಭಕ್ಕೆ ಚಾಲನೆ ಕೊಟ್ಟಿದ್ದೀರಿ. ಬ್ಲಾಗ್‌ಲೋಕಕ್ಕೆ ಆತ್ಮೀಯವಾದ ಸ್ವಾಗತ...
  ಸ್ನೇಹದಿಂದ

  ReplyDelete
 3. ಸುಸ್ವಾಗತ ಸರ್. ನಮಗಿನ್ನು ಕಾವ್ಯಗಳ ರಸದೌತಣ.

  ReplyDelete
 4. ಅದ್ಭುತ ಕಥಾಕಾವ್ಯ!! ಬ್ಲೊಗ್ ಲೊಓಕಕ್ಕೆ ಸ್ವಾಗತ. ತಮ್ಮ ಕವನ ಓದಿ ತು೦ಬಾ ಖುಷಿಯಾಯಿತು.

  ReplyDelete
 5. ಬ್ಲಾಗ್ ಲೋಕದ ಆತ್ಮೀಯರ ಬೀಡಿನಲ್ಲಿ ಒ೦ದು ಸಣ್ಣ ಹೆಜ್ಜೆ ಇಟ್ಟ ನನಗೆ ನೀವು ನೀಡಿದ ಆತ್ಮೀಯ ಸ್ವಾಗತಕ್ಕೆ ಹಾಗೂ ಶುಭ ಹಾರೈಕೆಗಳಿಗೆ ನಾ ಕೃತಜ್ಞ. ಧನ್ಯವಾದಗಳು ಶ್ಯಾಮಲಾ..

  ಅನ೦ತ್

  ReplyDelete
 6. ಬ್ಲಾಗ್ ಹೆಸರನ್ನೂ ಶ್ಲಾಘಿಸುತ್ತಾ ಹಾಗೆ ನನಗೂ ಬ್ಲಾಗ್ ಲೋಕಕ್ಕೆ ಆತ್ಮೀಯ ಬರುವಿಕೆಯನ್ನು ಮಾಡಿಕೊ೦ಡ ಚ೦ದ್ರು ಅವರಿಗೆ ನನ್ನ ಅಭಿಮಾನ ಪೂರ್ವಕ ವ೦ದನೆಗಳು. ನಿಮ್ಮೆಲ್ಲರ ಸ್ನೇಹ ದೊರಕಿದ್ದು ನನಗೆ ಸ೦ತಸವನ್ನು೦ಟು ಮಾಡಿದೆ.

  ಅನ೦ತ್

  ReplyDelete
 7. ಬ್ಲಾಗ್ ಲೋಕದಲ್ಲಿ ನನ್ನನ್ನು ಗುರುತಿಸಿ ಸ್ವಾಗತಿಸುವುದರೊಡನೆ, ನನ್ನ ಕವನವನ್ನು ಮೆಚ್ಚಿ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿದ ಸೀತಾರಾಮ್ ಅವರಿಗೆ ನನ್ನ ಕೃತಜ್ಞತಾ ಪೂರ್ವಕ ವ೦ದನೆಗಳು.

  ಅನ೦ತ್

  ReplyDelete
 8. ಆತ್ಮೀಯ ಸ್ವಾಗತ ಕೋರಿದ ಹಾಗೂ ರಸದೌತಣ ಅನ್ನುವ ಗುಣವಿಶೇಷಣವನ್ನೂ ಸೇರಿಸಿದ ಸುಬ್ರಹ್ಮಣ್ಯರಿಗೆ ಅಭಿಮಾನ ಪುರ್ವಕ ವ೦ದನೆಗಳು.

  ಅನ೦ತ್

  ReplyDelete
 9. ಬ್ಲಾಗ್ ಲೋಕಕ್ಕೆ ಪದಾರ್ಪಣ ಮಾಡಿದ್ದಕ್ಕೆ ನಾಯಕ್‌ರಿಗೆ ಶುಭಾಶಯಗಳು. ಆರಂಭದ ಕವನ ಬ್ಲಾಗ್‌ನ ಹೆಸರಿನ ಜೊತೆಗೆ ಅನ್ವರ್ಥವಾಗಿ ಮೂಡಿಬಂದಿದೆ. ಬ್ಲಾಗ್‌ನ ತಲೆಬರಹ "ಅನಂತದಿಂದ ದಿಗಂತದವರೆಗೆ" ಇಂಗ್ಲಿಷ್‌ನ ಜೊತೆಗೆ ಕನ್ನಡದಲ್ಲೂ ಇದ್ದರೆ ಇನ್ನೂ ಚಿನ್ನ. ಅನಂತನ ಅಂತರಾಳದಿಂದ ಹೊಮ್ಮಿದ ಭಾವಪೂರ್ಣ ಕವನಗಳಿಂದ ಮತ್ತು ಲೇಖನಗಳಿಂದ ಕನ್ನಡ ಸಾರಸ್ವತಲೋಕ ಮತ್ತು ಬ್ಲಾಗ್ ಲೋಕ ಇನ್ನಷ್ಟು ಶ್ರೀಮಂತವಾಗಲಿ ಎಂದು ಹಾರೈಸುವೆ. (ಎಂ.ಎನ್.ರವಿ)

  ReplyDelete
 10. ಸರ್
  ಬ್ಲಾಗ್ ಲೋಕಕ್ಕೆ ಆತ್ಮೀಯ ಸ್ವಾಗತ
  ಇದೊಂದು ಮನೆ ಇದ್ದಂತೆ
  ನಿಮ್ಮ ಕವನಗಳ ರುಚಿ ನಮಗೂ ನೀಡಿ

  ReplyDelete
 11. ಆತ್ಮೀಯ ರವಿಗೆ ಧನ್ಯವಾದಗಳು. ತಾವೆ೦ದ೦ತೆ ಶಿರೋನಾಮೆ ಕನ್ನಡಕ್ಕೆ ಬದಲಾಗಿದೆ. ತಮ್ಮ೦ತಹ ವಿಚಾರವ೦ತರೂ ಈ ಬ್ಲಾಗ್ ಲೋಕಕ್ಕೆ ಬರುವ ಮನಸ್ಸು ಮಾಡಿದರೆ ಕನ್ನಡ ಸಾರಸ್ವತಲೋಕ ಮತ್ತು ಬ್ಲಾಗ್ ಲೋಕ ಇನ್ನಷ್ಟು ಶ್ರೀಮಂತವಾಗುವುದರಲ್ಲಿ ಸ೦ದೇಹವಿಲ್ಲ.

  ಅನ೦ತ್

  ReplyDelete
 12. ಡಾ. ಗುರುಮೂರ್ತಿಯವರಿಗೆ ಧನ್ಯವಾದಗಳು. ಬ್ಲಾಗ್ ಲೋಕ ಒ೦ದು ಮನೆ ಎ೦ದಿದ್ದೀರಿ..ಮನೆಯವರ೦ತೆ ನನ್ನನ್ನು ಗುರುತಿಸಿದ್ದಕ್ಕೆ ಹಾಗೂ ನನ್ನ ಕವನಗಳ ಬಗ್ಗೆ ವಿಶೇಷವಾಗಿ ಆಸಕ್ತ್ಇ ತೋರಿಸಿದ್ದೀರಿ..ತಮಗೆ ವ೦ದನೆಗಳು.

  ಅನ೦ತ್

  ReplyDelete
 13. ಅನಂತ್ ಸಾರ್....
  ಸೀತಾರಾಮ ಸರ್ ಬ್ಲಾಗ್ನಲ್ಲಿ ನಿಮ್ಮನ್ನು ನೋಡಿದೆ. ನೋಡಿದ್ ಮೇಲೆ ಏನೂ ಹೇಳದೆ ಹೋಗೋದು ಸರಿಯೇ..?
  ಬ್ಲಾಗ್ ಲೋಕಕ್ಕೆ ಸುಸ್ವಾಗತ. ಈ ಕವನದ ಹಾಗೆ ಇನ್ನು ಒಳ್ಳೊಳ್ಳೆಯ ಕವನ, ಕಥೆಗಳು ನಮಗೆ ನಿಮ್ಮಿಂದ ಸಿಗಲಿ.
  ನಿಮ್ಮವ,
  ರಾಘು.

  ReplyDelete